ರಾಯಚೂರಿನಲ್ಲಿ 13 ಕೈಗಾರಿಕೆಗಳ ಸ್ಥಾಪನೆ

ಶನಿವಾರ, 3 ಡಿಸೆಂಬರ್ 2016 (11:25 IST)
2013-14 ನೇ ಸಾಲಿನಿಂದ 2016 ರ ಸೆಪ್ಟೆಂಬರ್ 30 ರ ವರೆಗೆ ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಮತ್ತು ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಗಳನ್ನು ಒಟ್ಟು 13 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 
 
ಇವುಗಳಿಂದ 413.66 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಆಗಲಿದೆ. 536 ಉದ್ಯೋಗವಕಾಶಗಳು ಲಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.
 
ಮಾನ್ವಿ ಪಟ್ಟಣದಲ್ಲಿ 58.29 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸ್ವಾಧೀನಪಡಿಸಿಕೊಂಡು, ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಕೈಗಾರಿಕೆ ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ 39.91 ಕೋಟಿ. ರೂ.ಗಳನ್ನು ವೆಚ್ಚ ಮಾಡಲಾಗಿದೆ. 
 
ರಾಯಚೂರಿನಲ್ಲಿ ಭೂ ಬ್ಯಾಂಕ್ ಯೋಜನೆಯಡಿಯಲ್ಲಿ 2072.22 ಎಕರೆ ಜಮೀನನ್ನು ಸ್ವಾಧೀನಪಡಿಸಲು 19-08-2010 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಬರದ ಕಾರಣ ಸಚಿವ ಸಂಪುಟದ ಅನುಮೋದನೆ ಪಡೆದು ಮುಂದಿನ ಭೂಸ್ವಾಧೀನ ಪ್ರಕ್ರಿಯೆ ಹೊರತುಪಡಿಸಿ ಕೆ.ಐ.ಎ.ಡಿ. ಕಾಯ್ದೆ ಕಲಂ 4 ರಡಿ ಕಳೆದ ನವೆಂಬರ್ 16 ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ