331 ಕೋಟಿ ಬಾಚಿದ ಕಾಶ್ಮೀರ್ ಫೈಲ್ಸ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಂಚಲನ ಮೂಡಿಸಿದಷ್ಟೇ ಬಾಕ್ಸ್ ಆಫೀಸಿನಲ್ಲೂ ಅದು ಸದ್ದು ಮಾಡಿತ್ತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೇ ತಮ್ಮ ವಿಕಿಪಿಡಿಯಾ ಪೇಜ್ ನಲ್ಲಿ ಬರೆದುಕೊಂಡಂತೆ, ಕೇವಲ 15 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ತಯಾರಿಸಿದ್ದಾರೆ. ಆದರೆ, ಅದು ಮಾಡಿದ ಗಳಿಕೆ ಮಾತ್ರ 331 ಕೋಟಿ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಅವರ ಮೇಲೆ ಆದ ಹಿಂಸಾಚಾರದ ಕುರಿತಾಗಿ ಮಾಡಿರುವ ಸಿನಿಮಾವಿದು. ಹಾಗಾಗಿ ಹಿಂದೂಪರ ಸಂಘಟನೆಗಳು ಸೇರಿದಂತೆ ಹಲವರು ಈ ಸಿನಿಮಾದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರೆ, ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಿಸಿದವು. ಪರಿಣಾಮ ಈವರೆಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಹರಿದು ಬಂದ ಮೊತ್ತ 331 ಕೋಟಿಯಾಗಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಶೂಟಿಂಗ್ ಲಾಕ್ಡೌನ್ನಿಂದ ಅರ್ಧಕ್ಕೆ ನಿಂತಾಗ ಸೈಡ್ಲೈನ್ನಲ್ಲಿ ಮತ್ತೊಂದು ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ವಿವೇಕ್.ಈ ಸಿನಿಮಾಗೆ ನೌಟಂಕಿ ಎನ್ನುವ ಶೀರ್ಷಿಕೆ ಇಡಲಾಗಿದೆ. ದಿ ಕಾಶ್ಮೀರ್ ಫೈಲ್ಸ್ನಲ್ಲಿ ಬಹುಮುಖ್ಯ ಪಾತ್ರ ಮಾಡಿರುವ ಅನುಪಮ್ ಖೇರ್ ಅವರು ನೌಟಂಕಿಯಲ್ಲಿ ಲೀಡ್ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗೆಳೆಯ ಸತೀಶ್ ಕೌಶಿಕ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರೂಮಿ ಜಫ್ರಿ ಅವರರು ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. ವಿವೇಕ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಿದ್ಧಗೊಂಡಿದ್ದು ಹೇಗೆ ಎನ್ನುವ ಬಗ್ಗೆ ವಿವೇಕ್ ಮಾಹಿತಿ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದೆವು. ಆ ಸಂದರ್ಭದಲ್ಲಿ ಕೊರೊನಾದಿಂದ ಲಾಕ್ಡೌನ್ ಘೋಷಣೆ ಆಯಿತು. ಅನುಪಮ್ ಖೇರ್ ಅವರು ಅಮೆರಿಕದಿಂದ ಶೂಟಿಂಗ್ಗಾಗಿ ಭಾರತಕ್ಕೆ ಬಂದಿದ್ದರು. ಲಾಕ್ಡೌನ್ನಿಂದ ಅವರು ಕೂಡ ಇಲ್ಲೇ ಉಳಿಯಬೇಕಾಯಿತು. ಈ ಸಮಯವನ್ನು ಬಳಕೆ ಮಾಡಿಕೊಳ್ಳಲು ನಾವು ನಿರ್ಧರಿಸಿದೆವು. ಸ್ಕ್ರಿಪ್ಟ್ ರೆಡಿ ಇತ್ತು. ಹೀಗಾಗಿ ಮತ್ತೊಂದು ಸಿನಿಮಾದ ಶೂಟಿಂಗ್ಅನ್ನು ಭೋಪಾಲ್ನಲ್ಲಿ ಪೂರ್ಣಗೊಳಿಸಿದೆವು ಎಂದಿದ್ದಾರೆ ವಿವೇಕ್.