ಫಿರೋಝಾಬಾದ್ನಲ್ಲಿ 10 ದಿನಗಳಲ್ಲಿ 45 ಮಕ್ಕಳು ಮೃತ್ಯು: ಡೆಂಗ್ಯೂ ಶಂಕೆ

ಬುಧವಾರ, 1 ಸೆಪ್ಟಂಬರ್ 2021 (11:43 IST)
ಫಿರೋಝಾಬಾದ್: ಉತ್ತರಪ್ರದೇಶದ ಫಿರೋಝಾಬಾದ್ ನಲ್ಲಿ ಶಂಕಿತ ಡೆಂಗ್ಯೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದ 10 ದಿನಗಳಲ್ಲಿ 45 ಮಕ್ಕಳು ಸೇರಿದಂತೆ 53 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಸರಕಾರವು ಈ ಸಾವಿನ ಕಾರಣ ಕುರಿತು ತನಿಖೆಗೆ ಮುಂದಾಗಿದೆ.

ಫಿರೋಝಾಬಾದ್ ವೈದ್ಯಕೀಯ ಕಾಲೇಜಿನಲ್ಲಿ, ದೃಶ್ಯಗಳು ಭಯಾನಕವಾಗಿವೆ. ಜ್ವರದಿಂದ ಬಳಲುತ್ತಿರುವ ಮಕ್ಕಳ ಸಾಲುಗಳು ಕಂಡುಬಂದಿದ್ದು, ಮಕ್ಕಳ ಪೋಷಕರು ಚಿಂತಿತರಾಗಿದ್ದಾರೆ ಹಾಗೂ ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.
ಆರು ವರ್ಷದ ಲಕ್ಕಿ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಮಗುವಿನ ಕುಟುಂಬದವರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. 'ಲಕ್ಕಿಯನ್ನು ಆಗ್ರಾಕ್ಕೆ ಕರೆದೊಯ್ಯುವಂತೆ ವೈದ್ಯರು ಹೇಳಿದರು ನಾವು ಆಗ್ರಾ ತಲುಪುವ ಹತ್ತು ನಿಮಿಷಗಳ ಮೊದಲು ಲಕ್ಕಿ ಕೊನೆಯುಸಿರೆಳೆದರು" ಎಂದು ಮಗುವಿನ ಚಿಕ್ಕಪ್ಪ ಪ್ರಕಾಶ್ ಹೇಳಿದ್ದಾರೆ.
ಹೆಚ್ಚಿನ ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಹಾಗೂ ಕೆಲವರು ಡೆಂಗ್ಯೂ ಸೋಂಕಿಗೆ ಒಳಗಾಗಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಎಲ್ .ಕೆ .ಗುಪ್ತಾ ಅವರು ಹೇಳಿದರು.
186 ಜನರು ಪ್ರಸ್ತುತ ಆಸ್ಪತ್ರೆಯಲಿದ್ದಾರೆ. ಮಕ್ಕಳಿಗೆ ಹೆಚ್ಚು ಸೋಂಕು ತಗಲಿರುವ ಕಾರಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ 1ರಿಂದ 8ನೇ ತರಗತಿಯ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಸೆಪ್ಟೆಂಬರ್ 6 ರವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ