Bangalore : ಮಳೆಗಾಲ ಬಂತೆಂದರೆ ಸಾಕು ಮನೆಯ ಅಕ್ಕ ಪಕ್ಕ ಇರುವಂತಹ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಜಾಸ್ತಿಯಾಗುತ್ತವೆ. ಇದರಿಂದ ಡೆಂಗ್ಯೂ ರೋಗದ ಪ್ರಕರಣಗಳು ಹೆಚ್ಚಾಗುವುದನ್ನು ನಾವು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿ ನೋಡುತ್ತಿದ್ದೇವೆ.
ಅದರಲ್ಲೂ ಈ ವರ್ಷ ಕೋವಿಡ್-19 ಹಾವಳಿಯಿಂದ ಬೇಸತ್ತ ಜನರಿಗೆ ಹೆಚ್ಚಾದ ಡೆಂಗ್ಯೂ ಪ್ರಕರಣಗಳು, ಚಿಕನ್ ಗುನ್ಯಾ ಪ್ರಕರಣಗಳು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕೆಲವೊಮ್ಮೆ ಕೆಲವೊಬ್ಬರಲ್ಲಿ ಡೆಂಗ್ಯೂ ಜ್ವರ ಜಾಸ್ತಿಯಾಗಿ ಮೃತಪಡುವುದನ್ನು ಸಹ ನಾವು ನೋಡಿದ್ದೇವೆ. ಜಿಕಾ ವೈರಸ್ ಪ್ರಕರಣಗಳು ನೆರೆರಾಜ್ಯಗಳಾದಂತಹ ಕೇರಳದಲ್ಲಿ ಹೆಚ್ಚಾಗುತ್ತಿರುವುದನ್ನು ಮನಗಂಡು ಅನೇಕ ಮುಂಜಾಗ್ರತೆ ಕ್ರಮಗಳನ್ನ ಕರ್ನಾಟಕದಲ್ಲಿ ಎಲ್ಲಾ ಜಿಲ್ಲಾಡಳಿತಗಳು ತೆಗೆದುಕೊಳ್ಳುತ್ತಿವೆ. ಹೀಗಿದ್ದರೂ ಸಹ, ಹಲವು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಜನರಗೆ ಮತ್ತು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಜುಲೈ 13ರವರೆಗೆ ರಾಜ್ಯದಲ್ಲಿ ಸುಮಾರು 1310 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ವರದಿಗಳ ಪ್ರಕಾರ, ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ 213 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 195 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ದ್ವಿತೀಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ ಇದ್ದು, ಅಲ್ಲಿ 145 ಡೆಂಗ್ಯೂ ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 127 ಪ್ರಕರಣಗಳು ಮತ್ತು ಬಳ್ಳಾರಿಯಲ್ಲಿ ಸುಮಾರು 69 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂ ಅಲ್ಲದೆ ಚಿಕನ್ ಗುನ್ಯಾ ಪ್ರಕರಣಗಳು ಸಹ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ರಾಜ್ಯದಲ್ಲಿ ಇದುವರೆಗೂ ಸುಮಾರು 457 ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು 81 ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಸುಮಾರು 77 ಪ್ರಕರಣಗಳು ದಾಖಲಾಗಿದ್ದು, ಎರಡನೆಯ ಸ್ಥಾನದಲ್ಲಿದೆ.
2020ರಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 3,823 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು ಮತ್ತು ಐದು ಜನರು ಸಾವನ್ನಪ್ಪಿದ್ದರು, ಅದಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಕಡಿಮೆಯಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಹೆಚ್ಚಾಗಬಾರದೆಂದು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಕಾ ವೈರಸ್ ಹರಡಲು ಕಾರಣವಾದ ಏಡಿಸ್ ಸೊಳ್ಳೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಹುಟ್ಟಿಕೊಳ್ಳುವ ಸಾಧ್ಯತೆಗಳಿದ್ದು, ಅರೋಗ್ಯ ಕಾರ್ಯಕರ್ತರಿಗೆ ಲಾರ್ವಾ ಬ್ರೀಡಿಂಗ್ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳು ಹೇಳಿದ್ದಾರೆ. ಸೊಳ್ಳೆ ಬತ್ತಿಗಳನ್ನು ಮನೆಯಲ್ಲಿ ಹಚ್ಚುವುದು, ಸೊಳ್ಳೆ ಪರದೆಗಳನ್ನು ಬಳಸುವುದು, ಮನೆಯಲ್ಲಿ ಮತ್ತು ಮನೆಯ ಸುತ್ತ ಮುತ್ತ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ.
ಮಳೆಗಾಲ ಶುರುವಾಗಿದ್ದರಿಂದ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಬಹುಮುಖ್ಯವಾಗಿದೆ ಮತ್ತು ದಿನದಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಡಿ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ವಿಪರೀತ ಜ್ವರ ಬರುವುದು, ಆಯಾಸವಾಗುವುದು ಡೆಂಗ್ಯೂ ರೋಗದ ಲಕ್ಷಣಗಳಾಗಿದ್ದು ಜಾಗರೂಕತೆಯಿಂದ ಇರುವುದು ತುಂಬಾ ಮುಖ್ಯವಾಗಿದೆ ಎಂದು ಇವರು ಹೇಳಿದ್ದಾರೆ