ಬಾನಂಗಳದಲ್ಲಿ ಹಾರ್ನ್ಬಿಲ್ಗಳ ಕಾದಾಟ
ತಮಿಳುನಾಡಿನ ನೆಲ್ಲಿಯಂಪತಿ, ವಾಲ್ಪಾರೈಗೆ ಹಾರ್ನ್ಬಿಲ್ಗಳು ವಲಸೆಗೆ ಬಂದಿದ್ದು. ಈ ಹಾರ್ನ್ಬಿಲ್ಗಳು ಕಾದಾಡುತ್ತಿವೆಯೋ, ಕಲಾತ್ಮಕವಾಗಿ ಹಾರಾಡುತ್ತಿವೆಯೋ ಎಂಬ ಸುಂದರವಾದ ಗೊಂದಲ ನೆಟ್ಟಿಗರಲ್ಲಿ ಮೂಡಿದೆ. IAS ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನಲ್ಲಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಆಗಾಗ ವನ್ಯಜೀವಿಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಸಲ ಅವರು ಟ್ವೀಟ್ ಮಾಡಿದ ಈ ವಿಡಿಯೋದಲ್ಲಿ ಹಾರ್ನ್ಬಿಲ್ಗಳು ಆಕಾಶದಲ್ಲಿ ಆಕ್ರಮಣಕಾರಿಯಾಗಿ ದಾಳಿಯಲ್ಲಿ ತೊಡಗಿಕೊಂಡಿವೆ. ಪ್ರತೀ ವರ್ಷವೂ ತಮಿಳುನಾಡಿನ ನೆಲ್ಲಿಯಂಪತಿ ಮತ್ತು ವಾಲ್ಪಾರೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಾರ್ನ್ಬಿಲ್ಗಳು ವಲಸೆಗೆ ಬರುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಹೀಗೆ ಅವು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡುವುದೇ ಅದ್ಭುತ ಅನುಭವ. ಬಹುವರ್ಣಗಳಲ್ಲಿ ವಿನ್ಯಾಸಗೊಂಡಿರುವ ಅವುಗಳ ಗರಿಗಳಂತೂ ನಯನ ಮನೋಹರ. ಆದರೆ ಈ ವಿಡಿಯೋದಲ್ಲಿ ಮಾತ್ರ ಈ ಚೆಂದುಳ್ಳಿಗಳು ಯಾಕೋ ಎಂತೋ ಅಂತೂ ಕಾದಾಟಕ್ಕಿಳಿದಿವೆ. ಈ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.