ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಕಾರ್ಯಕ್ರಮ

ಭಾನುವಾರ, 23 ಏಪ್ರಿಲ್ 2023 (19:30 IST)
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಹಡ್ಸನ್ ವೃತ್ತದ ಕಬ್ಬನ್ ಪಾರ್ಕ್ ಮುಖ್ಯ ದ್ವಾರದ ಬಳಿ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಜಾಗೃತಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಶ್ರೀ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.
 
ಚಾಲನೆ ನೀಡಿದ ಬಳಿಕ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ತುಷಾರ್ ಗಿರಿ ನಾಥ್ ರವರು ಮಾತನಾಡಿ, ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಬಂದು ಮತದಾನ ಮಾಡಲು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತದಾನ ದಿನವಾದ ಮೇ 10 ರಂದು ಎಲ್ಲರೂ ಬಂದು ತಪ್ಪದೆ ಮತ ಚಲಾಯಿಸಬೇಕು ಎಂದು ಕೋರಿದರು.
 
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿರವರು ಮಾತನಾಡಿ, ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
 
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಹಾಸ್ಯ ನಟರಾದ ರಮಾನಂದ ರವರ ಗೆಜ್ಜೆ ಹೆಜ್ಜೆ ರಂಗತಂಡದಿಂದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
 
ಹಡ್ಸನ್ ವೃತ್ತದ ಕಬ್ಬನ್ ಪಾರ್ಕ್ ಮುಖ್ಯ ದ್ವಾರದಿಂದ ಕಸ್ತೂರಬಾ ರಸ್ತೆ, ವಿಟ್ಟಲ್ ಮಲ್ಯ ರಸ್ತೆಯ ಮೂಲಕ ಸಾಗಿ ರಾಜಾರಾಮ್ ಮೋಹನ್ ರಾಯ್ ರಸ್ತೆ ಮಾರ್ಗದಲ್ಲಿರುವ ಬಿಬಿಎಂಪಿ ನೌಕರರ ಸಹಕಾರ ಸಂಘದ ಕಛೇರಿಯ ಮುಕ್ತಾಯಗೊಂಡಿತು.
 
ಈ ವೇಳೆ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಡಾ. ದಯಾನಂದ, ಅಪರ ಮುಖ್ಯ ಚುನಾವಣಾಧಿಕಾರಿಯಾದ ರಾಜೇಂದ್ರ ಚೋಳನ್, ವಲಯ ಜಂಟಿ ಆಯುಕ್ತರಾದ ಪಲ್ಲವಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ