ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರವಾಗಿದೆ. ಇದನ್ನು ತಡೆಗಟ್ಟಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೀಗಂತ ರಾಜ್ಯದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರವರ ರಿಟ್ ಪಿಟಿಷೇನ್ ಕುರಿತು ರಾಜ್ಯದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ರಾಜ್ಯದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಪಿ.ಎಸ್.ಸಂಧು ವಿಡಿಯೋ ಕಾನ್ಫರೆನ್ಸ್ ನಡೆಸಿ ಆದೇಶ ನೀಡಿದ್ರು.
ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯವದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದರು. ಶಾಲಾ ಮುಖ್ಯಸ್ಥರೊಡನೆ ಸಭೆ ಜರುಗಿಸಿ 6ಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾಗಳಲ್ಲಿ ಸಾಗಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಇಂತಹ ಪ್ರಕರಣಗಳು ಕಂಡು ಬಂದಲ್ಲಿ ವಾಹನದ ಪರವಾನಿಗೆ ಹಾಗೂ ಚಾಲನಾ ಪರವಾನಿಗೆಯನ್ನು ಕೂಡಲೇ ರದ್ದುಪಡಿಸಬೇಕು. ಹೆಚ್ಚಾಗುತ್ತಿರುವ ಅಪಘಾತ ಪ್ರಮಾಣ ತಗ್ಗಿಸಲು ಸ್ಥಳೀಯವಾಗಿ ಸೂಕ್ತ ಯೋಜನೆಗಳನ್ನು ಜಾರಿ ಮಾಡಬೇಕು. ಸವಾರರು ಹೆಲ್ಮೆಟ್, ಸೀಟ್ ಬೆಲ್ಟ ಬಳಸುವದು ಕಡ್ಡಾಯವಾಗಿದ್ದು ಇವುಗಳನ್ನ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.