ಮದ್ಯದ ನಶೆಯಲ್ಲಿ ಪತ್ನಿಗೆ ಚಾಕುವಿನಿಂದ ಇರಿದ ಪತಿ
ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ. ಕುಮಾರ್ ಎಂಬಾತ ಹಲ್ಲೆ ಮಾಡಿದ್ದು ಸುಧಾಮಣಿ ಎಂಬವರು ತೀವ್ರವಾಗಿ ಗಾಯಗೊಂಡು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಬುಧವಾರ ತಡರಾತ್ರಿ ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದು ತಲೆ, ಬೆನ್ನು, ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಹಲ್ಲೆ ಮಾಡಿ ಮಲಗಿದ್ದ ಕುಮಾರನನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ, ನಶೆಯಿಂದ ಇನ್ನೂ ಇಳಿಯದ ಪರಿಣಾಮ ಯಾವುದೇ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.