ತಿಮ್ಮರಾಯಸ್ವಾಮಿಗೆ ವಿಶೇಷ ಪುಷ್ಪಯಾಗ; ಭಕ್ತಿಸಾಗರದಲ್ಲಿ ತೇಲಿದ ಜನ…
ಗುರುವಾರ, 2 ಆಗಸ್ಟ್ 2018 (20:43 IST)
ಆಷಾಢ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
10 ಕ್ಕೂ ಹೆಚ್ಚು ವಿವಿಧ ರೀತಿಯ ಸುಮಾರು 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಸಾಮಾನ್ಯವಾಗಿ ಭಕ್ತರು ಯಜ್ಞಗಳ ಮೂಲಕ ದೇವತೆಗಳನ್ನು ತೃಪ್ತಿಪಡಿಸುತ್ತಾರೆ. ಆದರೆ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆಯುವ ವಿಧ ವಿಧದ ಪುಷ್ಪಗಳ ಮೂಲಕ ದೇವತೆಗಳ ಅನುಗ್ರಹವನ್ನ ಅಲ್ಲಿ ಪಡೆದುಕೊಳ್ಳಲಾಯಿತು.
ವೇದೊಕ್ತ ಮಂತ್ರ ಪುಷ್ಪಗಳಿಂದ ಪುರೋಹಿತರು, ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ಹೂಗಳನ್ನ ಸಮರ್ಪಣೆ ಮಾಡಿದರು. ಆನೇಕಲ್‍ನ ಹಲವು ಭಕ್ತರು ಯಾಗ ಮಾಡಲು ಪುಷ್ಪಗಳನ್ನ ದೇವಾಲಯಕ್ಕೆ ನೀಡಿದ್ದರು. ಸುಮಾರು 2 ಗಂಟೆಗಳ ಕಾಲ ವೇದ ಮಂತ್ರ ಘೋಷಣೆಯೊಂದಿಗೆ ಅಪರೂಪದ ಪುಷ್ಪ ಯಾಗವನ್ನ ನಡೆಸಲಾಯಿತು. ತಿಮ್ಮರಾಯಸ್ವಾಮಿ ದೇವಾಲಯದ ಈ ಅಪರೂಪದ ವಿದ್ಯಮಾನವನ್ನ ಸಾವಿರಾರು ಜನ ಕಣ್ಣು ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.