ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
ಶುಕ್ರವಾರ, 28 ಡಿಸೆಂಬರ್ 2018 (19:07 IST)
ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.
ರಾಜ್ಯದ ಮೈಸೂರು, ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು, ಕಾರವಾರ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಹಕಾರ ಸಂಘಗಳ ನಿಬಂಧಕ ಸೇರಿ ಐವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದೆ. ಭ್ರಷ್ಟ ಅಧಿಕಾರಿಗಳು ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಹಚ್ಚಿದ್ದಾರೆ.
ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಹೆಚ್ಚುವರಿ ನಿಬಂಧಕ ಆರ್. ಶ್ರೀಧರ್, ದಾವಣಗೆರೆ ಕೃಷಿ ಇಲಾಖೆ ಉಪನಿರ್ದೇಶಕಿ ಹಂಸವೇಣಿ. ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕ ಬೀಸೆಟಪ್ಪ, ಮೈಸೂರಿನ ಮೂಡಾದ ಕಿರಿಯ ಅಭಿಯಂತರ ಕೆ. ಮಣಿ ಹಾಗೂ ಮಂಗಳೂರು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ (ರೀಡರ್) ಮಂಜುನಾಥ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.
ಶ್ರೀಧರ್ ಅವರ ಆಲಿ ಆಸ್ಕರ್ ರಸ್ತೆಯ ಕಚೇರಿ, ಬೆಂಗಳೂರಿನ ಮನೆ, ಚಿಂತಾಮಣಿಯಲ್ಲಿನ 2 ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದರೆ, ಹಂಸವೇಣಿ ಅವರ ಕಚೇರಿ, ಮನೆ, ಅವರ ಪತಿ ಕಾರ್ಯನಿರ್ವಹಿಸುತ್ತಿರುವ ಕಾರವಾರದ ಜಲಾಯನ ಅಭಿವೃದ್ಧಿ ಕಾರ್ಯಕ್ರಮದ ಕಚೇರಿಯ ಮೇಲೆ ದಾಳಿ ನಡೆಸಿ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದ 15 ಎಕರೆ ಜಮೀನು, 5 ಸ್ಕೂಟರ್ಗಳು, ಚಿನ್ನ-ಬೆಳ್ಳಿ ಸೇರಿ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾನಿರೀಕ್ಷಕ (ಐಜಿ) ಚಂದ್ರಶೇಖರ್ ತಿಳಿಸಿದ್ದಾರೆ.
ಬೀಸೆಟಪ್ಪ ಅವರ ಯುಟಿಲಿಟಿ ಬಿಲ್ಡಿಂಗ್ನಲ್ಲಿರುವ ನಗರ ಯೋಜನೆ ಪೂರ್ವ ಕಚೇರಿ, ವಾಸದ ಮನೆ, ಕೆ. ಮಣಿ ಅವರ ಮೈಸೂರಿನ ಕಚೇರಿ, ಮನೆ, ಹುಣಸೂರಿನಲ್ಲಿರುವ ಸಂಬಂಧಿಕರ ಮನೆ ಹಾಗೂ ಮಂಜುನಾಥ್ ಅವರ ಉಡುಪಿಯ ಮನೆ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿನ ಮನೆ, ಮಂಗಳೂರಿನ ಕಚೇರಿ ಮೇಲೆ ಏಕಕಾಲದ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ.
ಬಲೆಗೆ ಬಿದ್ದಿರುವ 5 ಮಂದಿ ಅಧಿಕಾರಿಗಳ 17 ಕಡೆಗಳಲ್ಲಿ ಸ್ಥಳೀಯ ಎಸ್ಪಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಆದಾಯಕ್ಕೂ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಗಳಿಸಿರುವುದನ್ನು ಪತ್ತೆ ಹಚ್ಚಲಾಗಿದೆ.