ಹಿಂದಿ ರಿಯಾಲಿಟಿ ಶೋ, ಧಾರಾವಾಹಿಗಳ ಮೂಲಕ ಮನೋರಂಜನಾ ಲೋಕಕ್ಕೆ ಕಾಲಿಟ್ಟ್ ನಟ ಕಿರಣ್ ರಾಜ್, ಕನ್ನಡ ಧಾರಾವಾಹಿಗಳ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಳಿದರು. ಕಿನ್ನರಿ, ದೇವತೆ, ಚಂದ್ರಮುಖಿ ಧಾರಾವಾಹಿಗಳಲ್ಲಿ ನಟಿಸಿದ್ದ ಕಿರಣ್ ರಾಜ್ ಅವರಿಗೆ, 'ಪುಟ್ಟ ಗೌರಿ ಮದುವೆ' ಖ್ಯಾತಿಯ ರಜನಿ ರಾಘವನ್ ನಟನೆಯ 'ಕನ್ನಡತಿ' ಧಾರಾವಾಹಿ ದೊಡ್ಡ ಹಿಟ್ ಕೊಟ್ಟಿತ್ತು. ಕನ್ನಡತಿ ಹರ್ಷ ಪಾತ್ರದ ಮೂಲಕ ಕಿರಣ್ ರಾಜ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹರ್ಷ-ಭುವಿ ಜೋಡಿಯನ್ನು ಕನ್ನಡ ಕಿರುತೆರೆ ಪ್ರೇಕ್ಷಕರು ಮನಸಾರೆ ಮೆಚ್ಚಿದ್ದಾರೆ.
ತಮ್ಮ ಸ್ಟೈಲ್, ಲುಕ್, ಮಾತು, ಮುಗ್ಧತೆಯಿಂದಲೇ ಪ್ರೇಕ್ಷಕರ ಮನಸ್ಸು ಕದ್ದಿರುವ ಕಿರಣ್ ರಾಜ್, ಅನೇಕ ಬಾರಿ ಜನ ಮೆಚ್ಚಿದ ನಾಯಕ ಪ್ರಶಸ್ತಿ ಕೂಡ ಪಡೆದಿದ್ದಾರೆ. ಕಿರುತೆರೆಯ ಟಾಪ್ ನಟರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಕಿರಣ್ ರಾಜ್ ಗೂಗಲ್‌ನಲ್ಲಿ ಟ್ರೆಂಡ್ ಆದ ಮೊದಲ ಕಿರುತೆರೆ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಿರುತೆರೆ ಅಲ್ಲದೇ ಬೆಳ್ಳಿತೆರೆಯಲ್ಲೂ ಕಿರಣ್ ರಾಜ್ ಮಿಂಚುತ್ತಿದ್ದು, ಇತ್ತೀಚಿಗೆ ತೆರೆ ಕಂಡ 'ಬಡ್ಡೀಸ್' ಚಿತ್ರದಲ್ಲಿ ಕಿರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.
ಜೀವನಕ್ಕೆ ಹತ್ತಿರವಾದ ಖಡಕ್ ಡೈಲಾಗ್ ಹೊಡೆಯುವ ಮೂಲಕವೂ ಟ್ರೆಂಡ್ ಆಗಿರುವ ಕಿರಣ್ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಬೆಳ್ಳಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸದ್ದು ಮಾಡುತ್ತಿರುವ ಕಿರಣ್ ರಾಜ್ ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಎಳೆಯರಿಂದ ಹಿರಿಯವರ ವರೆಗೂ ಕಿರಣ್ ರಾಜ್ ಪಾತ್ರವನ್ನು ಮೆಚ್ಚದವರಿಲ್ಲ. ಇದೀಗ ಕಿರಾಣ್ ರಾಜ್ ಅವರಿಗೆ ಅಭಿಮಾನಿಯೊಬ್ಬರು ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಕಿರುತೆರೆ ನಟ ಕಿರಣ್ ರಾಜ್ ಅಭಿಮಾನಿ ನೀಡಿರುವ ಉಡುಗೊರೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಿರಣ್ ರಾಜ್ ಅವರ ಬಾಳು ಸದಾ ಬೆಳಗಿರಲಿ ಎಂದು ಅಭಿಮಾನಿಯೊಬ್ಬರು ತಮ್ಮ ಮೆಚ್ಚಿನ ಸ್ಟಾರ್‌ಗೆ ನಕ್ಷತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. 'ಕೋಮಾ ಬೆರೆನಿಸಸ್' ಎಂಬ ನಕ್ಷತ್ರ ಪುಂಜದ ನಕ್ಷತ್ರವೊಂದನ್ನು ಅಭಿಯಾನಿಯೊಬ್ಬರು ಕಿರಣ್ ರಾಜ್‌ಗಾಗಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ನಟ ಕಿರಣ್ ರಾಜ್ ಅವರ ಜೀವನ ಸದಾ ಹೊಳೆಯುತ್ತಿರಲಿ ಎಂದು ಅಭಿಮಾನಿ ಬಯಸಿದ್ದಾರೆ ಎನ್ನಲಾಗಿದೆ. ಕಿರುತೆರೆ ಕಲಾವಿದನೊಬ್ಬನಿಗೆ ಇಂತಹ ಉಡುಗೊರೆ ಹಾಗೂ ಇಷ್ಟೊಂದು ಪ್ರೀತಿ ಸಿಗುವುದು ಬಹಳ ವಿರಳವಾಗಿದ್ದು, ನಟ ಕಿರಣ್ ರಾಜ್ ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಿರಣ್ ರಾಜ್ ಕೇವಲ ನಟನಾಗಿ ಅಷ್ಟೇ ಅಲ್ಲ, ಸಮಾಜಮುಖಿ ಕಾರ್ಯದಿಂದಲೂ ಜನರ ಮೆಚ್ಚುಗೆ ಪಡೆದಿದ್ದಾರೆ. ಕೊರೊನಾದಂತಹ ಸಂದರ್ಭದಲ್ಲಿ ಕಿರಣ್ ರಾಜ್ ಅನೇಕರ ಹಸಿವು ನೀಗಿಸಿದ್ದಾರೆ. ಅಲ್ಲದೇ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನಟ ಕಿರಣ್ ರಾಜ್ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ಮಂಗಳ ಮುಖಿಯರನ್ನು ಗೌರವಿಸುದರ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಿರಣ್ ರಾಜ್ ಮಂಗಳ ಮುಖಿಯರ ಭೋಜನ ಕೂಟ ಸಹ ನಡೆಸಿದ್ದರು. ಕಿರಣ್ ರಾಜ್ ಅವರ ಸಹಾಯ ಮನಸ್ಥಿತಿಗೆ ಮನಸೋಲದ ಪ್ರೇಕ್ಷಕರೇ ಇಲ್ಲ. ಹೀಗಾಗಿ ಜನ ಅವರನ್ನು ಇನ್ನಷ್ಟು ಹೆಚ್ಚು ಪ್ರೀತಿಸುತ್ತಾರೆ.