ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

ಶುಕ್ರವಾರ, 28 ಜನವರಿ 2022 (19:56 IST)
ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್‌ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.
ಏರ್‌ ಇಂಡಿಯಾ ಅಧಿಕೃತ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾಟಾ ಸನ್ಸ್‌ ಅಧ್ಯಕ್ಷ ಎನ್.ಚಂದ್ರಶೇಖರನ್‌ ಭೇಟಿಯಾಗಿದ್ದರು. ಟಾಟಾ ಗ್ರೂಪ್, ಏರ್‌ ಇಂಡಿಯಾವನ್ನು ಮರಳಿ ಪಡೆದಿದ್ದಕ್ಕೆ ಸಂತೋಷವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹರಾಜಿಗೆ ಸಂಬಂಧಿಸಿದ ಎಲ್ಲಾ ವಿಧಾನಗಳು ಪೂರ್ಣಗೊಂಡಿವೆ. ಏರ್‌ ಇಂಡಿಯಾ ಹೂಡಿಕೆ ಪ್ರಕ್ರಿಯೆ ಮುಚ್ಚಲಾಗಿದೆ. ಷೇರುಗಳನ್ನು ಏರ್‌ ಇಂಡಿಯಾದ ಹೊಸ ಮಾಲೀಕರಾಗಿರುವ ತಾಲೇಸ್‌ ಪ್ರೈವೆಟ್‌ ಲಿಮಿಟೆಡ್‌ಗೆ (ಟಾಟಾ ಸನ್ಸ್‌) ವರ್ಗಾಯಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್‌ ಕಾಂತ್‌ ಪಾಂಡೆ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು 18,000 ಕೋಟಿಗೆ ಏರ್‌ ಇಂಡಿಯಾವನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು. ಅದಾದ ನಂತರ ವಿಮಾನಯಾನ ಸಂಸ್ಥೆಯಲ್ಲಿನ ತನ್ನ ಶೇ.100 ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಲು ಟಾಟಾ ಗ್ರೂಪ್ಸ್‌ಗೆ ಲೆಟರ್‌ ಆಫ್‌ ಇಂಟೆಂಟ್‌ (ಎನ್‌ಒಐ) ನೀಡಲಾಯಿತು. ನಂತರ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.
1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್‌ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರವು 1953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್‌ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿದೆ.
ಸಾಲದ ಸುಳಿಯಲ್ಲಿದ್ದ ಏರ್‌ ಇಂಡಿಯಾವನ್ನು ಕೇಂದ್ರ ಸರ್ಕಾರವು ಟಾಟಾ ಸನ್ಸ್‌ಗೆ ಮಾರಾಟ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ