ಮದ್ಯಪ್ರಿಯರಿಗೆ ಶಾಕ್: ಮೇ 19ರವರೆಗೆ ಮದ್ಯ ಸಿಗಲ್ಲ!
ಕೆಎಸ್‍ಬಿಸಿಎಲ್ ಹೊಸ ನೀತಿಯಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿರುವ ಮದ್ಯ ಮಾರಾಟ ವರ್ತಕರು ಇಂದಿನಿಂದ ಮೇ 19ರ ವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಇದರಿಂದ ಮದ್ಯ ಸಿಗುವುದು ಅನುಮಾನ!
ವೀಕೆಂಡ್‌ನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ. ಮದ್ಯ ಖರೀದಿ ಮಾಡುವ ವ್ಯವಸ್ಥೆ ಬದಲಾಗಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.
ಮ್ಯಾನುವಲ್ ವ್ಯವಸ್ಥೆ ಮೂಲಕ ವೈನ್ ಮರ್ಚೆಂಟ್ಸ್ ಮತ್ತು ಬಾರ್ ಮಾಲೀಕರು ಮದ್ಯ ಖರೀದಿ ಮಾಡುತ್ತಿದ್ದರು. ಹೊಸದಾಗಿ ರೂಪಿಸಿರುವ ವೆಬ್‍ಸೈಟ್ ಓಪನ್ ಮಾಡಿ, ಅದರಲ್ಲಿ ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕಾಗಿದೆ.
ರಾತ್ರಿ 9 ರಿಂದ ಬೆಳಗ್ಗೆ 9ರವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಸಮಸ್ಯೆ ನೀಡುತ್ತಿದೆ. ಹೀಗಾಗಿ ಈ ಪದ್ಧತಿಯನ್ನು ವಿರೋಧಿಸಿ ಮದ್ಯ ವರ್ತಕರು ಮುಷ್ಕರ ಮಾಡುತ್ತಿದ್ದಾರೆ.
ಶ್ರೀಮಂತ ಬಾರ್ ಮಾಲೀಕರು ಅಥವಾ ವೈನ್ ವರ್ತಕರು ತಮಗೆ ಬೇಕಾಗಿರುವಷ್ಟು ಮದ್ಯ ಖರೀದಿ ಮಾಡುತ್ತಾರೆ. ಆದರೆ ಸಣ್ಣ ಮದ್ಯ ಮಾರಾಟಗಾರರಿಗೆ ಈ ವ್ಯವಸ್ಥೆಯಿಂದ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಲಾಗಿದೆ.ʼ
ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಶೇ.80 ಜನರಿಗೆ ಕಳೆದ ಒಂದು ತಿಂಗಳಿನಿಂದ ಈ ಪದ್ಧತಿ ಸಮಸ್ಯೆ ನೀಡಿದೆ. ಈ ಸಮಸ್ಯೆ ಬಗೆಹರಿಸುವುದಾಗಿ ಆಯುಕ್ತರು ಹೇಳಿದ್ದಾರೆ. ಆದರೆ ಇನ್ನೂ ಪರಿಹಾರ ಲಭಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.