ಬಸ್ ಎಲ್ಲಾ ಫುಲ್ಲು..ವೋಟ್ ಹಾಕಲು ಊರಿಗೆ ಹೋಗೋದು ಹೇಗಪ್ಪಾ…!

Krishnaveni K

ಗುರುವಾರ, 18 ಏಪ್ರಿಲ್ 2024 (09:56 IST)
ಬೆಂಗಳೂರು: ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 26 ರಂದು ಕರ್ನಾಟಕದ ಬಹುತೇಕ ಕಡೆ ಮತ್ತು ಕೇರಳದಲ್ಲಿ ಚುನಾವಣೆ ನಡೆಯಲಿದೆ.

ಇದೀಗ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ರಾಜಧಾನಿ ಬೆಂಗಳೂರಿನಿಂದ ತಮ್ಮ ತಮ್ಮ ಊರಿನ ಕಡೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಸ್ ಗಳು, ರೈಲುಗಳು ಎಲ್ಲವೂ ಫುಲ್ ರಶ್!.. ಯಾವ ಬಸ್, ರೈಲು ನೋಡಿದರೂ ಸೋಲ್ಡ್ ಔಟ್ ಎಂದು ತೋರಿಸುತ್ತಿವೆ.

ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹೊರಡುವ ಕೆಎಸ್ ಆರ್ ಟಿಸಿ ಎಲ್ಲಾ ಮಾದರಿಯ ಬಸ್ ಗಳ ಟಿಕೆಟ್ ಗಳೂ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಏಪ್ರಿಲ್ 25 ರಂದು ಮೆಜೆಸ್ಟಿಕ್ ನಿಂದ ಯಾವ ಬಸ್ ನೋಡಿದರೂ ಹೌಸ್ ಫುಲ್. ಕೆಲವೊಂದು ಸ್ಪೆಷಲ್ ಬಸ್ ಹಾಕಿದರೂ 800 ರೂ. ಇರುವ ಟಿಕೆಟ್ ಏಕಾಏಕಿ 1150 ರೂ.ಗೆ ಏರಿಕೆಯಾಗಿದೆ. ವಿಶೇಷ ಬಸ್ ಎಂದು ಹಾಕಿದರೂ ಒಂದು ವೋಟ್ ಹಾಕಲು ಇಷ್ಟೊಂದು ದುಬಾರಿ ಖರ್ಚು ಬೇಕಾ ಎಂದು ಹಿಂದೇಟು ಹಾಕುವವರೂ ಇದ್ದಾರೆ.

ಇನ್ನು ರೈಲುಗಳದ್ದೂ ಇದೇ ಪರಿಸ್ಥಿತಿ. ಖಾಸಗಿ ಬಸ್ ಅಂತೂ ಕೇಳುವುದೇ ಬೇಡ. ಡಿಮ್ಯಾಂಡ್ ಜಾಸ್ತಿಯಾದಂತೆ ರೇಟ್ ಕೂಡಾ ಗಗನಕ್ಕೇರಿದೆ. ಅದರಲ್ಲೂ ಗಡಿ ಜಿಲ್ಲೆಗಳಿಗೆ ತೆರಳುವ ಬಸ್ ಗಳಲ್ಲಿ ಟಿಕೆಟ್ ಇಲ್ಲ. ಕೆಲವೊಂದು ಕಡೆ ಉಚಿತ ಬಸ್ ವ್ಯವಸ್ಥೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಎಷ್ಟು ಜನರ ಕ್ಯೂ ಇರುತ್ತದೋ ಹೇಳಲಾಗದು.

ವೋಟ್ ಹಾಕಲೇ ಬೇಕು, ಸಮಯಕ್ಕೆ ಸರಿಯಾಗಿ ತಲುಪಲೇಬೇಕು ಎಂದಾದರೆ ನೀವು ಊರಿನ ಕಡೆಗೆ ಎರಡು ದಿನ ಮುಂಚಿತವಾಗಿಯೇ ಹೋಗುವುದು ಒಳ್ಳೆಯದು. ಇನ್ನು ಹಗಲು ಸಂಚಾರ ಮಾಡುವವರಿಗೆ ಸದ್ಯಕ್ಕೆ ಟಿಕೆಟ್ ಖಾಲಿಯಿದೆ. ಆದರೆ ಇದಕ್ಕೆ ಎರಡು-ಮೂರು ದಿನ ಕಚೇರಿಗಳಿಗೆ ರಜೆ ಹಾಕಲು ರೆಡಿಯಿರಬೇಕಾಗುತ್ತದೆ. ಕಳೆದ ವಾರದಿಂದಲೇ ಹೆಚ್ಚು ಕಡಿಮೆ ಎಲ್ಲಾ ಬಸ್ ಬುಕಿಂಗ್ ಸೋಲ್ಡ್ ಔಟ್ ಆಗುತ್ತಾ ಬಂದಿದೆ. ವೀಕೆಂಡ್ ಬೇರೆ ಇರುವುದರಿಂದ ಆ ಭಾನುವಾರವೂ ಬಸ್ ಗಳಲ್ಲಿ ಟಿಕೆಟ್ ನದ್ದು ಇದೇ ಕತೆ. ಬೆಂಗಳೂರಿಗೆ ವಾಪಸ್ ಬರಲೂ ಭಾನುವಾರ ಪ್ಲ್ಯಾನ್ ಮಾಡಲೇಬೇಡಿ. ಚುನಾವಣೆ ದಿಸೆಯಿಂದ ಏಪ್ರಿಲ್ 25 ರಾತ್ರಿ ಮತ್ತು ಏಪ್ರಿಲ್ 29 ಸೋಮವಾರ ಬೆಂಗಳೂರಿನಲ್ಲಿ ಟ್ರಾಫಿಕ್ ಜ್ಯಾಮ್ ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ