ಬರ ಪರಿಹಾರದಲ್ಲಿ ಮಲತಾಯಿ ಧೋರಣೆ ಆರೋಪ: ನಾಳೆ ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

Sampriya

ಶನಿವಾರ, 27 ಏಪ್ರಿಲ್ 2024 (20:46 IST)
ಬೆಂಗಳೂರು: ನಾವು ಕೇಳಿದ್ದು 18,172 ಕೋಟಿ ರೂಪಾಯಿ. ಆದರೆ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿ  ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರದ ನಡೆ ವಿರೋಧಿಸಿ ನಾಳೆ  ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಮ್ಮ ನಾಯಕರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಇನ್ನು ನಮ್ಮ ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತೇವೆ.

ಖಂಡಿತಾ ಕಾನೂನು ಮುಂದುವರಿಯುತ್ತದೆ. ನಾವು ಭಿಕ್ಷೆ ಕೇಳುತ್ತಿಲ್ಲ. ಇದು ನಮ್ಮ ಹಕ್ಕು, ಅದನ್ನು ಕೇಳುತ್ತಿದ್ದೇವೆ. ಇದನ್ನು ನೀಡುವುದು ಕೇಂದ್ರದ ಕರ್ತವ್ಯ. ನ್ಯಾಯಾಲಯ ಹಾಗೂ ಜನರ ಮುಂದೆ ನಮ್ಮ ಹೋರಾಟ ಮುಂದುವರಿಯಲಿದೆ

223 ತಾಲೂಕುಗಳಲ್ಲಿ ಬರವಿದೆ. 120 ವರ್ಷಗಳ ಇತಿಹಾಸದಲ್ಲಿ ಹೀಗಾಗಿರಲಿಲ್ಲ. ಬೆಂಗಳೂರಿಗೆ ನೀರಿನ ಬವಣೆ ಹೆಚ್ಚಾಗಿತ್ತು. ಆದರೂ ಬವಣೆಯಾಗದಂತೆ ನಿರ್ವಹಿಸುತ್ತಿದ್ದೇವೆ. 56.9 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿತ್ತು. ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ ಡಿಕ್ಲೇರ್ ಮಾಡಿದ್ದೆವು. ಆಗಸ್ಟ್ನಲ್ಲೇ ಕೇಂದ್ರದ ಟೀಂ ಬಂದು ಪರಿಶೀಲಿಸಿತ್ತು. ನಾವು ಕಂಪ್ಲೀಟ್ ದಾಖಲೆ ಕೇಂದ್ರಕ್ಕೆ ಕೊಟ್ಟಿದ್ದೇವೆ. ಇಷ್ಟಾದರೂ ಬರ ಪರಿಹಾರವನ್ನು ಬಿಡುಗಡೆ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ