ಟಿಪ್ಪು ಜಯಂತಿಗಿರುವ ಉತ್ಸಾಹ ರಾಜ್ಯೋತ್ಸವ ಆಚರಣೆಗಿಲ್ಲ: ಅಮಿತ್ ಷಾ ಲೇವಡಿ

ಗುರುವಾರ, 2 ನವೆಂಬರ್ 2017 (15:43 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಉತ್ಸಾಹ ಇರಲಿಲ್ಲ. ಏಕೆಂದರೆ ಅವರು ಟಿಪ್ಪು ಜಯಂತಿ ಆಚರಿಸಲು‌ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವ್ಯಂಗ್ಯವಾಡಿದ್ದಾರೆ.

ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಮುಂದಿನ‌ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಪುನರುಚ್ಚರಿಸಿದರು. ಸಿಎಂ ಸಿದ್ದರಾಮಯ್ಯ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವ್ರಿಗೆ ದೇಶ ಹಾಗೂ ರಾಜ್ಯದ ಬಗ್ಗೆ ಚಿಂತೆಯಿಲ್ಲ ಎಂದರು.

ಕೇಂದ್ರದ ಮೋದಿ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ  ನೆರವು ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡ್ತಾರೆ. ಮೋದಿ ರಾಜ್ಯಕ್ಕೆ ಎರಡೂವರೆ  ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ 1,30,000 ಕೋಟಿ ರೂ. ಅನುದಾನ ಎಲ್ಲಿ ಹೋಯ್ತು.? ರೈಲ್ವೆಗೆ 2,097 ಕೋಟಿ ರೂ. ಸೇರಿದಂತೆ ಹಲವು ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದೆ. ಆದ್ರೆ ಅದು ಕರ್ನಾಟಕದ ಜನತೆಗೆ ತಲುಪುತ್ತಿಲ್ಲ. ಕಾರಣ ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಹಣ ಲೂಠಿ ‌ಹೊಡೆಯುತ್ತಿದೆ ಎಂದು ಆರೋಪಿಸಿದರು.

ಎಸ್.ಡಿ.ಪಿ.ಐ,  ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಮೇಲಿನ‌ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ  ಹಿಂತೆಗೆದುಕೊಂಡಿದೆ. ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನ‌ಮಾನ ನೀಡಲು ಮೋದಿ ಸರ್ಕಾರ ಮುಂದಾದಾಗ ಕಾಂಗ್ರೆಸ್ ಈ ವಿಧೇಯಕಕ್ಕೆ ಬೆಂಬಲ ನೀಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

5 ವರ್ಷದಿಂದ ಇಲ್ಲಿ ಅಭಿವೃದ್ಧಿಯೇ ಆಗಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ಹೆಗಲಿಗೆ ಹೆಗಲು ಕೊಡುವಂತ ಸರ್ಕಾರವನ್ನು ಆಡಳಿತಕ್ಕೆ ತನ್ನಿ ಎಂದು ವಿನಂತಿ‌ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಯಾತ್ರೆ ಕೇವಲ ಸರ್ಕಾರ, ಮುಖ್ಯಮಂತ್ರಿ ಬದಲಿಸಲು ಅಲ್ಲ. ಆದರೆ ಈ‌ ಪರಿವರ್ತನಾ ಯಾತ್ರೆ ಕರ್ನಾಟಕದ ಸ್ಥಿತಿ ಬದಲಿಸಲು. ರಾಜ್ಯದ ಮುಂದಿನ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆ ಸಾಗಲಿದೆ. 75 ದಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಿ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೆಸೆಯಲಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ