ಇತ್ತೀಚೆಗಷ್ಟೇ ಹೈದರಾಬಾದ್‌ನ ಫಿಲಂ ಚೇಂಬರ್‌ನಲ್ಲಿ ಟಿಕೆಟ್ ದರ, ಒಟಿಟಿ ಬಿಡುಗಡೆ, ಕಾರ್ಮಿಕರ ದಿನಗೂಲಿ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಭೆ ನಡೆಸಿದ್ದರು. ಈ ವೇಳೆ, ಎಲ್ಲ ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಆಗಸ್ಟ್ 1 ರಿಂದ ಚಿತ್ರೀಕರಣ ತಡೆಹಿಡಿಯುವುದಾಗಿ ನಿರ್ಧರಿಸಿದ್ದರು. ಅದರಂತೆ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತೆಲುಗು ಚಲನಚಿತ್ರ ನಿರ್ಮಾಪಕರ ಸಂಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ದಿಲ್ ರಾಜು, 'ಕೊರೊನಾ ನಂತರ ಹೆಚ್ಚು ಹಾನಿಗೊಳಗಾದ ಉದ್ಯಮಗಳಲ್ಲಿ ಚಲನಚಿತ್ರೋದ್ಯಮವೂ ಒಂದು. ಒಂದೆಡೆ ಟಿಕೆಟ್ ದರ ಮತ್ತೊಂದೆಡೆ ಒಟಿಟಿ ಸಿನಿಮಾ ಥಿಯೇಟರ್ಗಳ ಉಳಿವು ಪ್ರಶ್ನಾರ್ಹವಾಗಿದೆ. ಹಾಗಾಗಿ, ನಾವು ಆಗಸ್ಟ್ 1ರಿಂದ ತೆಲುಗು ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಚರ್ಚಿಸುತ್ತೇವೆ' ಎಂದಿದ್ದಾರೆ.