ಶಿರೂರಿನಲ್ಲಿ ಅರ್ಜುನನಿಗಾಗಿ ಇಂದು ಮತ್ತೆ ಹುಡುಕಾಟಕ್ಕೆ ಸಿಕ್ಕಿದೆ ಮಹತ್ವದ ಮುನ್ನಡೆ

Krishnaveni K

ಬುಧವಾರ, 14 ಆಗಸ್ಟ್ 2024 (10:24 IST)
ಶಿರೂರು: ಗುಡ್ಡಕುಸಿತದಲ್ಲಿ ಶಿರೂರಿನಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ ಸೇರಿದಂತೆ ಉಳಿದವರ ಪತ್ತೆಗೆ ಇಂದಿನಿಂದ ಮತ್ತೆ ಕಾರ್ಯಾಚರಣೆ ಚುರುಕಾಗಲಿದೆ.
 

ಈಶ್ವರ ಮಲ್ಪೆ ನೇತೃತ್ವದಲ್ಲಿ ಇಂದು ಮುಳುಗು ತಜ್ಞರು ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸಲಿದ್ದಾರೆ. ನಿನ್ನೆ ಈಶ್ವರ ಮಲ್ಪೆ ಒಬ್ಬರೇ ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಲಾರಿಯ ಅವಶೇಷ ಪತ್ತೆಯಾಗಿತ್ತು. ಇದು ಅರ್ಜುನ್ ಲಾರಿಯದ್ದೇ ಅವಶೇಷ ಎಂದು ಖಚಿತಪಡಿಸಲಾಗಿದೆ.

ಹೀಗಾಗಿ ಅರ್ಜುನ್ ಕುಟುಂಬದವರಲ್ಲಿ ಈಗ ಹೊಸ ಭರವಸೆ ಮೂಡಿದೆ. ಅರ್ಜುನ್ ಮೃತದೇಹ ಸಿಕ್ಕಬಹುದು ಎಂದು ಆಶಾಭಾವನೆ ಮೂಡಿದೆ. ಈ ಮೊದಲು ಲಾರಿ ಅವಶೇಷ ಸಿಕ್ಕ ಜಾಗದಿಂದಲೇ ಈಶ್ವರ ಮಲ್ಪೆ ಮತ್ತು ತಂಡದ ಹುಡುಕಾಟ ಆರಂಭವಾಗಿದೆ. ಇದೇ ಸ್ಥಳದಲ್ಲೇ ಅರ್ಜುನ್ ಮೃತದೇಹವೇನಾದರೂ ಸಿಕ್ಕಬಹುದೇನೋ ಎಂಬ ಆಶಾಭಾವನೆ.

ಇದೀಗ ಗಂಗಾವಳಿ ನದಿ ಪರಿಸರದಲ್ಲಿ ಮಳೆ ವಾತಾವರಣ ಕೊಂಚ ಕಡಿಮೆಯಾಗಿರುವುದರಿಂದ ಹುಡುಕಾಟಕ್ಕೆ ಮುನ್ನಡೆ ಸಿಕ್ಕಬಹುದು ಎಂಬ ಭರವಸೆಯಿದೆ. ನಿನ್ನೆಯ ಹುಡುಕಾಟದಲ್ಲಿ ನದಿ ತಳದಲ್ಲಿ ಸಾಕಷ್ಟು ಕಲ್ಲು ಬಂಡೆಗಳು ಬಿದ್ದಿದೆ ಎಂದು ಈಶ್ವರ ಮಲ್ಪೆ ಹೇಳಿದ್ದಾರೆ. ಹೀಗಾಗಿ ಹುಡುಕಾಟ ನಡೆಸಿದರೂ ಮೃತದೇಹ ಸಿಗುವುದು ಅಷ್ಟು ಸುಲಭವಲ್ಲ. ಅದೂ ಅಲ್ಲದೆ, ಇಷ್ಟು ದಿನ ಕಳೆದಿರುವುದರಿಂದ ಮೃತದೇಹ ಅಲ್ಲೇ ಇರಬಹುದು ಎಂದು ಖಚಿತವಾಗಿ ಹೇಳಲಾಗದು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ