ಬೆಂಗಳೂರು : ರಾಜಧಾನಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತಡೆಗೆ ವಿಫಲವಾಗಿದೆ ಎಂದು ಕ್ರಮ ಕೈಗೊಳ್ಳದ ಬಿಬಿಎಂಪಿ , ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಪ್ರಸನ್ನ ಬಿ. ವರಾಳೆ, ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠವು, ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೇ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಚುನಾವಣೆ ವೇಳೆ 60,000 ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಕೇವಲ 134 ದೂರು ಪರಿಗಣಿಸಿ 40 ಎಫ್ಐಆರ್ ದಾಖಲಿಸಲಾಗಿದೆ. ಉಳಿದ ಪ್ರಕರಣಗಳು ಏನಾಯ್ತು ಎಂದು ಗರಂ ಆಗಿದೆ.
ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ. ಬೆಂಗಳೂರು ಸುಂದರವಾಗಿರುವುದು ಸರ್ಕಾರಕ್ಕೆ ಬೇಕಿಲ್ಲವೇ? ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಇರಬೇಕೆಂದು ಸರ್ಕಾರದ ಅಪೇಕ್ಷೆಯೇ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್ಗಳಿಂದ ಕಳಂಕ. ಬೆಂಗಳೂರಿನ ಬಗ್ಗೆ ಹೂಡಿಕೆದಾರರಿಗೆ ಎಂತಹ ಚಿತ್ರಣ ನೀಡುತ್ತಿದ್ದೀರಿ? ಬೆಂಗಳೂರಿನ ಸ್ಥಿತಿ ಸುಧಾರಿಸದಿದ್ದರೆ ಹೂಡಿಕೆ ಹೇಗೆ ತರುತ್ತೀರಿ? ಬೆಂಗಳೂರನ್ನು ಅದರ ಅದೃಷ್ಟಕ್ಕೇ ಬಿಡಲಾಗಿದೆ.