ವ್ಯಾನಿಟಿ ಬ್ಯಾಗ್ ನಲ್ಲಿನ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯರ ಬಂಧನ
ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರ ವ್ಯಾನಿಟಿ ಬ್ಯಾಗ್ ನ ಜೀಪ್ ಸರಿಸಿ ಬಂಗಾರದ ಆಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಶಿಕಾರಿಪುರ ಮೂಲದ ಹೇಮಾವತಿ ವಡ್ಡರ (32) ಹಾಗೂ ಶೋಭಾ ವಡ್ಡರ (35) ಬಂಧಿತರು. ಬಂಧಿತರಿಂದ 4.29 ಲಕ್ಷ ರೂ. ಮೌಲ್ಯದ 143 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ಬಂಗಾರದ ಆಭರಣಗಳು ಹಳೇ ಬಸ್ ನಿಲ್ದಾಣದಲ್ಲಿ ಐದು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಇವರ ಮೇಲೆ ಹಳೇ ಹುಬ್ಬಳ್ಳಿ, ತಿರುಪತಿ ಹಾಗೂ ಕಲಬುರ್ಗಿಯಲ್ಲಿಯೂ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.