ಭಾರಿ ಮಳೆಗೆ ಭಕ್ತರ ಸಂಖ್ಯೆ ಇಳಿಮುಖ

ಗುರುವಾರ, 23 ಆಗಸ್ಟ್ 2018 (15:03 IST)
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಭೂ ಕುಸಿತದಿಂದ ಪ್ರಮುಖ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಇದರ ಬಿಸಿ ದೇವಸ್ಥಾನಗಳಿಗೂ ಮುಟ್ಟಿದ್ದು, ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ.

 ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ. ಈ ಬಾರಿ ಸುರಿದ ಭಾರಿ ಮಳೆಗೆ ಭೂ ಕುಸಿತದಿಂದ ಶಿರಾಡಿ ಘಾಟಿ ರಸ್ತೆ - ಸಂಪಾಜೆ ಘಾಟಿ ರಸ್ತೆ ಸಂಚಾರ ಬಂದ್ ಆಗಿದೆ. ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಗಾಗ ಟ್ರಾಫಿಕ್ ಜಾಮ್ ಇದೆ. ಎಡ  ಕುಮೇರಿಯಲ್ಲಿ ಭೂ ಕುಸಿತದಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಬಂದ್ ಆಗಿದೆ. ಇದರ ಬಿಸಿ ದೇವಸ್ಥಾನಗಳಿಗೂ ಮುಟ್ಟಿದೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಆಗಿರುವ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಆಗಿದೆ.

ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಆಗಿರುವ ಕಾರಣ ದೇಶದ ನಾನಾ ಭಾಗಗಳ ಭಕ್ತಾದಿಗಳು  ಸುಬ್ರಮಣ್ಯಕ್ಕೆ ಆಗಮಿಸುತ್ತಾರೆ. ಅದರಲ್ಲೂ ರಜಾ ದಿನಗಳಲ್ಲಿ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಸದಾ ಭಕ್ತರಿಂದ ತುಂಬಿ ತುಳುಕುತಿದ್ದ  ಸುಬ್ರಮಣ್ಯ ಕ್ಷೇತ್ರ ಖಾಲಿ ಖಾಲಿಯಾಗಿದೆ. ರಸ್ತೆ  ಸಂಪರ್ಕ ಸರಿ ಆಗುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಭಕ್ತರ ಸಂಖ್ಯೆ ಕಡಿಮೆ ಆಗಿರುವ ಕಾರಣ ಸೇವಾ ಬುಕ್ಕಿಂಗ್  ಕಡಿಮೆ ಆಗಿದ್ದು, ದೇವಸ್ಥಾನದ ಆದಾಯವೂ ಕಡಿಮೆ ಆಗಲಿದೆ. ಇನ್ನೊಂದು ಕಡೆ ಯಾತ್ರಿಕರ  ಸಂಖ್ಯೆ ಕಡಿಮೆ ಆಗಿರುವುದರಿಂದ ಸುಬ್ರಮಣ್ಯದಲ್ಲಿರುವ ಹೋಟೆಲ್ ಉದ್ಯಮ, ಹಣ್ಣು ಕಾಯಿ ಅಂಗಡಿಗಳಿಗೂ  ವ್ಯಾಪಾರ ಕಡಿಮೆ ಆಗಿದೆ.

ಶಿರಾಡಿ ಘಾಟಿ ಸಂಪಾಜೆ ಘಾಟಿ ಸರಿಯಾದ ಬಳಿಕವಷ್ಟೇ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗಲಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ