ನವದೆಹಲಿ: ಅಬಕಾರಿ ನೀತಿ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಂದು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಅವಧಿ ಅಂತ್ಯಗೊಂಡ ಹಿನ್ನೆಲೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿಗೆ ಶರಣಾದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿದ್ದ ಕೇಜ್ರಿವಾಲ್ ಅವರಿಗೆ ಜೂನ್ 1ರ ವರೆಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಜಾಮೀನಿನ ಅವಧಿ ಅಂತ್ಯವಾಗಿದ್ದರಿಂದ ಕೇಜ್ರಿವಾಲ್ ಅವರು ಜೈಲಿಗೆ ಶರಣಾಗಿದ್ದಾರೆ.
ಇನ್ನೂ ಅರವಿಂದ್ ಕೇಜ್ರಿವಾಲ್ ಅವರು ಜೈಲಿಗೆ ಶರಣಾಗುವ ಮುನ್ನ ಅವರು, ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.
ಬಳಿಕ ಕನ್ನಾಟ್ ಪ್ಲೇಸ್‌ನ ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪಕ್ಷದ ಕಚೇರಿಯಲ್ಲಿ ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.