ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿಂದ ಹೊರಬರುತ್ತಿದ್ದಂತಯೇ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಕಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಮಿ ಮರಳಿ ಪಡೆಯುವುದು ಸೇರಿದಂತೆ 10 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಜಾಮೀನು ಪಡೆದು ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್, ಇಂಡಿಯಾ ಬಣ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಎಎಪಿ ಸರ್ಕಾರದ ಭಾಗವಾಗಲಿದೆ. ಮೋದಿ ಗ್ಯಾರಂಟಿ ಮತ್ತು ಕೇಜ್ರಿವಾಲ್ ಗ್ಯಾರಂಟಿಗಳಲ್ಲಿ ಒಂದನ್ನು ಜನರು ಆಯ್ಕೆ ಮಾಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನನ್ನ ಗ್ಯಾರಂಟಿಗಳ ಬಗ್ಗೆ ಇಂಡಿಯಾ ಬಣದ ಪಕ್ಷಗಳ ಜೊತೆ ಚರ್ಚೆ ನಡೆಸಿಲ್ಲ. ಆದರೆ, ನನ್ನ ಇಂಡಿಯಾ ಬಣದ ಪಕ್ಷಗಳು ಇದನ್ನು ಈಡೇರಿಸಲಿದೆ. ಉಚಿತ ವಿದ್ಯುತ್, ಒಳ್ಳೆಯ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಗ್ಯಾರಂಟಿಗಳನ್ನು ಎಎಪಿ ಈಡೇರಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಗ್ಯಾರಂಟಿ ಪೂರೈಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಮತ್ತು ದೆಹಲಿಯಲ್ಲಿ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ದೇಶದಾದ್ಯಂತ ನಾವು ಇದನ್ನು ಮಾಡಬಲ್ಲೆವು. ದೇಶದಾದ್ಯಂತ ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ. ನಾವು ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಮಾಡಬಲ್ಲೆವು ಎಂದಿದ್ದಾರೆ.