ಕೆಲಸ ಹುಡುಕಿಕೊಂಡು ಬಂದ ಯುವಕ,ಯುವತಿಗೆ ಅಟೋ ಚಾಲಕ ಏನೆಲ್ಲಾ ಮಾಡಿದ ಗೊತ್ತಾ

Krishnaveni K

ಶುಕ್ರವಾರ, 24 ಮೇ 2024 (10:46 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಕೆಲಸ ಹುಡುಕಿಕೊಂಡು ಅದೆಷ್ಟೋ ಮಂದಿ ದೂರದ ಊರುಗಳಿಂದ ಬಂದಿಳಿಯುತ್ತಾರೆ. ಆದರೆ ಇಲ್ಲಿ ಬಂದು ವಂಚನೆಗೊಳಗಾಗುವ ಎಷ್ಟೋ ಜನರಿರುತ್ತಾರೆ. ಅಂತಹದ್ದೇ ಘಟನೆಯೊಂದು ಕೋಣಕುಂಟೆ ಪೊಲೀಸ್ ಸ್ಟೇಷನ್ ‍ವ್ಯಾಪ್ತಿಯಲ್ಲಿ ನಡೆದಿದೆ.

ಕೇರಳ ಮೂಲದ ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿರುವ ಮತ್ತೊಬ್ಬ ಗೆಳೆಯ ಸಹಾಯ ಮಾಡುತ್ತಾನೆಂಬ ನಿರೀಕ್ಷೆಯಲ್ಲಿ ರಾತ್ರಿ 10.30 ರ ವೇಳೆಗೆ ಜಯನಗರ ಮೆಟ್ರೋ ಸ್ಟೇಷನ್ ಬಳಿ ಕಾಯುತ್ತಾ ನಿಂತಿದ್ದರು. ಆದರೆ ಆ ಗೆಳೆಯ ಬರಲೇ ಇಲ್ಲ.

ಈ ವೇಳೆ ಇವರನ್ನು ಗಮನಿಸಿದ ಆರೋಪಿ ಆಟೋ ಚಾಲಕ ಇಬ್ಬರನ್ನೂ ಪುಸಲಾಯಿಸಿ ತನ್ನ ಜೊತೆಗೆ ಕರೆದೊಯ್ದಿದ್ದಾನೆ. ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಯುವಕ ಮತ್ತು ಯುವತಿ ರೈಲ್ವೇ ಸ್ಟೇಷನ್ ಗೆ ಬಿಟ್ಟರೆ ಸಾಕು ಎಂದು ಹೇಳಿದ್ದಾರೆ. ಆದರೆ ಇವರಿಬ್ಬರ ಅಸಹಾಯಕತೆ ಗಮನಿಸಿದ ಆಟೋ ಚಾಲಕ ತನ್ನದೊಂದು ಮನೆಯಿದೆ, ಈವತ್ತು ರಾತ್ರಿ ಅಲ್ಲಿರಬಹುದು ಎಂದು ಹೇಳಿ ಪಿಳ್ಳಗಾನಹಳ್ಳಿಯ ಮನೆಗೆ ಕರೆದೊಯ್ದಿದ್ದಾನೆ.

ದಾರಿ ನಡುವೆ ಆಟೋ ಚಾಲಕ ಮದ್ಯ ಖರೀದಿಸಿದ್ದ. ಮನೆಗೆ ಬಂದ ಮೇಲೆ ಯುವಕ-ಯುವತಿಯ ಎದುರೇ ಮದ್ಯಪಾನ ಮಾಡಿದ್ದಾನೆ. ಯುವಕನಿಗೂ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಮದ್ಯದ ಮತ್ತಿನಲ್ಲಿ ಯುವತಿಯನ್ನು ತನ್ನ ಜೊತೆ ಮಲಗುವಂತೆ ಕರೆದಿದ್ದಾನೆ. ಯವತಿ ನಿರಾಕರಿಸಿದಾಗ ಹಲ್ಲೆ ಮಾಡಿದ್ದಾನೆ. ಈ ವೇಳೆ ಯುವಕನೂ ತಡೆಯಲು ಯತ್ನಿಸಿದ್ದು, ಅಲ್ಲೇ ಇದ್ದ ಚಾಕುವಿನಿಂದ ಇಬ್ಬರೂ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಹೇಗೋ ದಾರಿ ಮಾಡಿಕೊಂಡು ತಪ್ಪಿಸಿಕೊಂಡಿದ್ದಾರೆ. ಈಗ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ