ಬೆಂಗಳೂರು: ನೀವು ಚಪ್ಪರಿಸಿಕೊಂಡು ತಿನ್ನುವ ಪಾನಿಪೂರಿಗೆ ನಿಷೇಧ ಹೇರುವ ಬಗ್ಗೆ ಇಂದು ಅಂತಿಮ ನಿರ್ಣಯ ಹೊರಬೀಳಲಿದೆ. ಪಾನಿಪೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗುತ್ತಿದೆ.
ಪಾನಿಪೂರಿಗೆ ಬಳಸಲಾಗುವ ಸಾಸ್ ನಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಅಂಶ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇಂತಹ ಅಸುರಕ್ಷಿತ ವಸ್ತು ಬಳಕೆ ಮಾಡುವುದಕ್ಕೆ ನಿಷೇಧ ಹೇರುವ ಸಾಧ್ಯತೆಯಿದೆ. ಈ ಬಗ್ಗೆ ಆಹಾರ ಸುರಕ್ಷತಾ ಮತ್ತ ಗುಣಮಟ್ಟ ಇಲಾಖೆ ಪರೀಕ್ಷೆ ನಡೆಸಿ ವರದಿ ನೀಡಿತ್ತು.
ರಾಜ್ಯಾದ್ಯಂತ ಸುಮಾರು 78 ಪಾನಿಪೂರಿ ಮಾದರಿ ಪರೀಕ್ಷಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಪ್ರಕಾರ 18 ಮಾದರಿಗಳು ಮನುಷ್ಯರ ಸೇವನೆಗೆ ಯೋಗ್ಯವಲ್ಲ ಎಂದು ತಿಳಿದುಬಂದಿತ್ತು. ಈ ಸಂಬಂಧ ಇಂದು ಅಧಿಕಾರಿಗಳು ಸಭೆ ನಡೆಸಲಿದ್ದು, ನಿಷೇಧ ಹೇರುವ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಪಾನಿಪೂರಿಯ ರುಚಿ ಹೆಚ್ಚಿಸುವ ಕಟ್ಟಾ-ಮೀಟಾ ಸಾಸ್ ನಲ್ಲಿ ಹಾನಿಕಾರಕ ಅಂಶವಿರುವುದು ಪತ್ತೆಯಾಗಿದೆ. ಪೂರಿಯ ಮಾದರಿಯನ್ನೂ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಇದರಲ್ಲಿ ಯಾವುದೇ ಅಸುರಕ್ಷಿತ ಸಾಧನ ಕಂಡುಬಂದಿಲ್ಲ. ಆದರೆ ಅದಕ್ಕೆ ಬಳಸುವ ಸಾಸ್ ಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಬಂದಿದೆ.