ಬೆಂಗಳೂರು: ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಯಾಕೆ ಎಂಬುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ.
ಯಾವುದೇ ವಿಷಯ ಮುಚ್ಚಿಟ್ಟುಕೊಂಡಿರುತ್ತದಲ್ಲಾ, ಅದು ಚರ್ಚೆಯಾಗಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಜೀವನವನ್ನೇ ತೆಗೆದುಕೊಳ್ಳಿ. ಅವರ ಜೀವನದ ಹಲವು ಸತ್ಯಗಳು ಈಗ ಹೊರಗೆ ಬರುತ್ತಿವೆ. ಬಾಬಾ ಸಾಹೇಬರು ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರ ಮಾಡಲು ಒಂದಿಂಚು ಜಾಗ ಕೊಡದವರು ನಮಗೆ ಏನು ಹೇಳುತ್ತಾರೆ? ಎಂದು ಯತ್ನಾಳ್ ಹೇಳಿದ್ದಾರೆ.
ಅಂಬೇಡ್ಕರ್ ಆವತ್ತೇ ಹೇಳಿದ್ದಾರೆ, ಕಾಂಗ್ರೆಸ್ ಎಂದರೆ ಉರಿಯುತ್ತಿರುವ ಮನೆ. ನನ್ನ ದಲಿತ ಬಾಂಧವರು ಯಾರೂ ಕಾಂಗ್ರೆಸ್ ಗೆ ಹೋಗಬೇಡಿ ಎಂದಿದ್ದರು. ಇದು ಯಾರಿಗಾದರೂ ಗೊತ್ತಿತ್ತಾ? ಅವರಿಗೆ ಭಾರತ ರತ್ನ ಕೂಡಾ ಕೊಡಲಿಲ್ಲ. ಮೊರಾರ್ಜಿ ದೇಸಾಯಿಯವರು ಬಂದ ಮೇಲಷ್ಟೇ ಅವರಿಗೆ ಭಾರತ ರತ್ನ ಅವಾರ್ಡ್ ಸಿಕ್ಕಿದ್ದು.
ಇಂದಿರಾ ಗಾಂಧಿಯವರು ತಮಗೆ ತಾವೇ ಕೊಟ್ಟುಕೊಂಡರು, ನೆಹರೂ ತಾನು ಚಾಚಾ ಎಂದು ತಮಗೆ ತಾವೇ ಕೊರಳಿಗೆ ಹಾರ ಹಾಕಿಸಿಕೊಂಡ್ರು. ರಾಜೀವ್ ಗಾಂಧಿ ತಾನೇ ತಗೊಂಡ್ರು. ಇನ್ನು ಐದು ವರ್ಷವಾದರೆ ಸೋನಿಯಾ ಗಾಂಧಿಯವರೂ ಭಾರತ ರತ್ನ ಅವಾರ್ಡ್ ತಗೋತಿದ್ರು.
ಸನಾತನ ಧರ್ಮ ನಮ್ಮ ದೇಶದ ಸಂಸ್ಕೃತಿ. ಸನಾತನ ಇಲ್ಲದೇ ನಮ್ಮ ಹಿಂದೂ ಧರ್ಮವಿಲ್ಲ, ಲಿಂಗಾಯತರಿಲ್ಲ. ವೀರಶೈವರಿಲ್ಲ. ಕುಂಕುಮ ಹಚ್ಚುವುದು ಯಾಕೆ? ವಿಭೂತಿ ಹಚ್ಚುವುದು ಗೋವಿನದ್ದೇ ಅಲ್ವಾ? ಗೋವು ಸನಾತನ ಧರ್ಮವೇ. ನಾವು ಇವರಿಗೆಲ್ಲಾ ಆಂಜಲ್ಲ. ನಾವು ಬಸವಣ್ಣನವರ ಪರ ಇದ್ದೀವಿ, ಬಸವಣ್ಣನವರ ತತ್ವಗಳ ಪರ ಇದ್ದೀವಿ ಎಂದು ಯತ್ನಾಳ್ ಸಮರ್ಥನೆ ನೀಡಿದ್ದಾರೆ.