ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಿಡಿ ಕಾರುತ್ತಲೇ ಇರುತ್ತಾರೆ. ಅವರ ಹೇಳಿಕೆಗಳು ಕೆಲವೊಮ್ಮೆ ಪಕ್ಷಕ್ಕೇ ಮುಜುಗರ ತಂದಿಡುತ್ತದೆ. ಇದೀಗ 1,200 ಕೋಟಿ ರೂ. ರೆಡಿಯಿರುವ ಗಂಭೀರ ಆರೋಪ ಮಾಡಿ ಬಿಜೆಪಿಯನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನೊಂದೆಡೆ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯರನ್ನು ಸಿಲುಕಿಸಿ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಇಂಬು ನೀಡಿದಂತಾಗಿದೆ.
ಕೆಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಗುಂಪು 1,200 ಕೋಟಿ ರೂ. ರೆಡಿ ಮಾಡಿಕೊಂಡಿದ್ದು ಕಾಂಗ್ರೆಸ್ ಸರ್ಕಾರ ಉರುಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು. ಇದನ್ನು ಡಿಕೆ ಶಿವಕುಮಾರ್ ಕೂಡಾ ಅನುಮೋದಿಸಿದ್ದು, ನಮಗೂ ಕೆಲವೊಂದು ಮೂಲಗಳಿಂದ ಈ ಮಾಹಿತಿ ಬಂದಿದೆ. ಬಿಜೆಪಿ ನಮ್ಮ ಸರ್ಕಾರ ಉರುಳಿಸಲು ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ.
ಅಲ್ಲದೆ, 1,200 ಕೋಟಿ ರೂ. ವಿಚಾರವನ್ನು ನಾವು ಹೈಕಮಾಂಡ್ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಐಟಿ, ಇಡಿ ಇಲಾಖೆಗೆ ದೂರು ನೀಡುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ಮತ್ತೊಂದು ರಾಜಕೀಯ ದಾಳವಾಗಿ ಬಳಸುತ್ತಿದ್ದರೆ ಇತ್ತ ಬಿಜೆಪಿಗೆ ತನ್ನದೇ ಪಕ್ಷದ ನಾಯಕನ ಹೇಳಿಕೆಯಿಂದ ಸಂಕಷ್ಟ ಎದುರಾಗಿದೆ.