ಶಿವಮೊಗ್ಗ: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವರನ್ನು ಮುಂಚಿತವಾಗಿ ಆಹ್ವಾನಿಸಿಲ್ಲ ಎಂಬ ವಿಚಾರ ಈಗ ಕೇಂದ್ರ ಮತ್ತು ರಾಜ್ಯದ ನಡುವಿನ ತಿಕ್ಕಾಟವಾಗಿ ಮಾರ್ಪಟ್ಟಿದೆ.
ಸಿಎಂ ಸಿದ್ದರಾಮಯ್ಯಗೆ ಕೇವಲ ಮೂರು ದಿನ ಮುಂಚಿತವಾಗಿ ಆಹ್ವಾನ ನೀಡಲಾಗಿತ್ತು. ಆದರೆ ಅದಾಗಲೇ ಸಿಎಂ ಸಿದ್ದರಾಮಯ್ಯಗೆ ಇಂಡಿ ತಾಲೂಕಿನಲ್ಲಿ ಒಂದು ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ಅವರು ಕಾರ್ಯಕ್ರಮ ಮುಂದೂಡಲು ಮನವಿ ಮಾಡಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದೇ ನಿನ್ನೆಯೇ ಸೇತುವೆ ಉದ್ಘಾಟನೆಯಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ಯಾವುದೇ ಸಚಿವರೂ, ಶಾಸಕರೂ ಭಾಗಿಯಾಗದೇ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಈ ಸೇತುವೆಗೆ ಜಾಗ ಕೊಟ್ಟಿದ್ದು ಏನು ಇವರ ಅಪ್ಪಂದಾ? ಸಿಎಂ ಸಿದ್ದರಾಮಯ್ಯಗೆ ಕೇವಲ ಮೂರು ದಿನ ಮುಂಚಿತವಾಗಿ ಕರೆದರೆ ಸಾಕಾ? ಅವರು ಹೇಗ್ರೀ ಬರಕ್ಕಾಗುತ್ತೆ? ನಿಮಗೆ ಜಾಗ ಕೊಡಿಸಲು ನಾವು ಬೇಕು. ಆದರೆ ಉದ್ಘಾಟನೆಗೆ ನಮಗೆ ಸರಿಯಾಗಿ ಆಹ್ವಾನ ಕೊಡಕ್ಕಾಗಲ್ವಾ? ಯಾರೆಲ್ಲಾ ಈ ಸೇತುವೆ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾರೆ ಆ ಅಧಿಕಾರಿಗಳನ್ನೂ ಸಸ್ಪೆಂಡ್ ಮಾಡಬೇಕು ಎಂದು ನಾನು ಈವತ್ತು ಆಗ್ರಹಿಸುತ್ತೇನೆ ಎಂದಿದ್ದಾರೆ.
ನಿಮ್ಮದೇ ಜಾಗದಲ್ಲಿ ಏನೋ ನಿಮ್ಮದೇ ಕಾರ್ಯಕ್ರಮ ಅಂತಾದ್ರೆ ನೀವು ಏನಾದ್ರೂ ಮಾಡ್ಕೊಳ್ಳಿ. ನಾವು ಕೇಳಲ್ಲ. ನಮ್ಮ ಜಾಗದಲ್ಲಿ ಮಾಡುವಾಗ ನಮಗೆ ಆಹ್ವಾನ ಕೊಡೋದು ಬೇಡ್ವಾ? ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.