ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಈಗ ಇದೊಂದು ದಾರಿಯಿದೆ

Krishnaveni K

ಶನಿವಾರ, 20 ಜುಲೈ 2024 (12:35 IST)
ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರಸ್ತೆ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಸಂಕಷ್ಟದಲ್ಲಿದ್ದರು. ಅನೇಕರು ಚಾರ್ಮಾಡಿ, ಶಿರಾಡಿ ಘಾಟಿ ಬಳಿ ವಾಹನದಲ್ಲೇ ಅನ್ನ, ನೀರು ಇಲ್ಲದೇ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿತ್ತು.

ರಾಜ್ಯ ರಾಜಧಾನಿಯಿಂದ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೂರು ಘಾಟಿಗಳನ್ನೂ ಮಳೆಯ ಕಾರಣಕ್ಕೆ ಬಂದ್ ಮಾಡಿರುವುದರಿಂದ ರೈಲು, ವಿಮಾನ ಸಂಚಾರಕ್ಕೆ ಭಾರೀ ಬೇಡಿಕೆ ಬಂದಿತ್ತು. ಆದರೆ ರಸ್ತೆ ಮಾರ್ಗವಾಗಿಯೇ ಸಂಚಾರ ಮಾಡಬೇಕಾದವರು ಪರಿತಪಿಸುತ್ತಿದ್ದರು.

ಕರಾವಳಿ ಜಿಲ್ಲೆಗಳಿಗೆ ತೆರಳಲು ಪರ್ಯಾಯವಾಗಿ ಬೇರೆ ಕೆಲವೊಂದು ಮಾರ್ಗಗಳನ್ನು ಬಳಸಬಹುದು. ಆದರೆ ಕೆಲವು ಕಿ.ಮೀ.ಗಳಷ್ಟು ಹೆಚ್ಚುವರಿ ಸಂಚಾರ ಮಾಡಬೇಕಾಗಬಹುದು. ಬೆಂಗಳೂರಿನಿಂದ ಹಾಸನ, ಚಿಕ್ಕಮಗಳೂರು, ಶೃಂಗೇರಿ, ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ತಲುಪಬಹುದು. ಈ ಮಾರ್ಗ ಸ್ವಲ್ಪ ದೂರವೆನಿಸಿದರೂ ಮಂಗಳೂರು ತಲುಪಬಹುದು.

ಇದಲ್ಲದೇ ಹೋದರೆ ಆಗುಂಬೆ ಘಾಟಿ ಮೂಲಕ ಉಡುಪಿಗೆ ಬಂದು ಅಲ್ಲಿಂದ ಮಂಗಳೂರಿಗೆ ತೆರಳಬಹುದು. ಅದೂ ಕೂಡಾ ಕೊಂಚ ಅಪಾಯಕಾರಿಯಾದರೂ ಸದ್ಯಕ್ಕೆ ಪ್ರಯಾಣ ಮಾಡಬಹುದು. ಇಲ್ಲದೇ ಹೋದರೆ ಬೆಂಗಳೂರು, ಮೈಸೂರು, ಮಡಿಕೇರಿ ಮಾರ್ಗವಾಗಿ ಹಗಲು ಪ್ರಯಾಣ ಮಾಡಬಹುದು.

ಬೆಂಗಳೂರಿನಿಂದ ಉಡುಪಿಗೆ ಹೋಗಲು ಮಾರ್ಗಗಳಿವೆ. ಹಾಸನ-ಬೇಲೂರು, ಬಾಳೆ ಹನ್ನೂರು, ಆಗುಂಬೆ ಮೂಲಕ ಉಡುಪಿಗೆ ತಲುಪಬಹುದು. ಇಲ್ಲವಾದರೆ ಹಿರಿಯೂರು, ಹೊಸದುರ್ಗ, ಅಜ್ಜಂಪುರ, ತರೀಕೆರೆ, ಕೊಪ್ಪ-ಆಗುಂಬೆ ಮಾರ್ಗವಾಗಿ ಉಡುಪಿಗೆ ತಲುಪಿದರೆ ಅಲ್ಲಿಂದ ಮಂಗಳೂರಿಗೆ ತಲುಪಬಹುದು. ಆದರೆ ಈ ಪರ್ಯಾಯ ಮಾರ್ಗಗಳು ಹೆಚ್ಚುವರಿ ಹೊತ್ತು ತೆಗೆದುಕೊಳ್ಳುವುದರ ಜೊತೆಗೆ ಈಗ ಟ್ರಾಫಿಕ್ ಕೂಡಾ ಹೆಚ್ಚಾಗಿರುತ್ತದೆ. ಅನಿವಾರ್ಯವಾದರೆ ಈ ಮಾರ್ಗಗಳ ಮೂಲಕ ಸಂಚಾರ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ