ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿರುವ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ನೀರು ಪೋಲಾಗುವುದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ವೃಥಾ ನೀರು ಪೋಲು ಮಾಡಿದರೆ 5 ಸಾವಿರ ರೂ. ದಂಡ ವಿಧಿಸುವುದಾಗಿ ಹೇಳಿದೆ.
ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಿರುವ ಹಿನ್ನಲೆಯಲ್ಲಿ ಹನಿ ಹನಿ ನೀರೂ ಅಮೂಲ್ಯವಾಗಿದೆ. ಕೆಲವೆಡೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ಬಿಟ್ಟು ಹಿತ ಮಿತವಾಗಿ ನೀರು ಬಳಕೆ ಮಾಡುವಂತೆ ಜಲಮಂಡಳಿ ಸೂಚನೆ ನೀಡಿದೆ.
ಅಲ್ಲದೆ, ವಾಹನ ತೊಳೆಯಲು ಮನರಂಜನಾ ಕಾರಂಜಿಗಳಿಗೆ, ಸಾರ್ವಜನಿಕರ ಕುಡಿಯುವ ನೀರು ಬಳಸಿದರೆ 5 ಸಾವಿರ ರೂ. ದಂಡ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದೆ. ಜಲಮಂಡಳಿ ಕಾಯ್ದೆ ಪ್ರಕಾರ 5000 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ತಪ್ಪು ಪುನರಾವರ್ತನೆಯಾದರೆ ಪ್ರತಿ ದಿನವೂ ಹೆಚ್ಚುವರಿಯಾಗಿ 500 ರೂ. ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಹೊಸದಾಗಿ ತೆಗೆದರೂ ನೀರು ಬರುತ್ತಿಲ್ಲ. ಕಾವೇರಿ ನೀರೂ ಅಪರೂಪವಾಗಿದೆ. ಹೀಗಿರುವಾಗ ಕುಡಿಯಲು ಮತ್ತು ದೈನಂದಿನ ಅಗತ್ಯಗಳಿಗೆ ಹೊರತಾಗಿ ಯಾವುದೇ ಕಾರಣಕ್ಕೂ ನೀರು ಪೋಲು ಮಾಡುವ ಪರಿಸ್ಥಿತಿಯಲ್ಲಿಲ್ಲ.