ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತ ಉಗ್ರ ಮಿನಾಜ್ ಹಿನ್ನಲೆ

Krishnaveni K

ಶುಕ್ರವಾರ, 8 ಮಾರ್ಚ್ 2024 (10:41 IST)
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆಸಿದ ಉಗ್ರನ ಬಗ್ಗೆ ಎನ್ ಐಎಗೆ ಮಹತ್ವದ ಸುಳಿವು ಸಿಕ್ಕಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆತನ ಹಿನ್ನಲೆಯೇನು ನೋಡೋಣ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಶಂಕಿತ ಉಗ್ರ ಸುಲೇಮಾನ್ ನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತನೇ ಜೈಲಿನಲ್ಲೇ ಕುಳಿತು ಕೃತ್ಯ ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಿಂದ ಈತನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.

ಮೂಲತಃ ಬಳ್ಳಾರಿ ನಿವಾಸಿಯಾಗಿರುವ ಸುಲೇಮಾನ್ ಗೆ ಐಸಿಸಿ ಉಗ್ರರ ಜೊತೆ ಸಂಪರ್ಕವಿತ್ತು. 2023 ರ ಡಿಸೆಂಬರ್ ನಲ್ಲಿ ಎನ್ಐಎ ಅಧಿಕಾರಿಗಳು ಈತನನ್ನು ಬಂಧಿಸಿದ್ದರು. ಇದೀಗ ಆತ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾನೆ. ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಈತನ ಬಗ್ಗೆ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ ವಶಕ್ಕೆ ಪಡೆದಿದ್ದಾರೆ. ಕೌಲ್ ಬಾಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಸುಲೇಮಾನ್ ಪಿಎಫ್ ಐ ಕಾರ್ಯಕರ್ತನಾಗಿದ್ದ. ಅಲ್ಪಸಂಖ್ಯಾತ ಯುವಕರನ್ನು ಭಯೋತ್ಪಾದನೆಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದೇ ಇವನ ಕೆಲಸವಾಗಿತ್ತು. ಇದೇ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು.

ಈಗ ಈತನನ್ನು ಬಂಧಿಸಿ ವಿಚಾರಣೆ ನಡೆಸುವುದರಿಂದ ರಾಮೇಶ್ವರಂ ಕೆಫೆಯ ಸ್ಪೋಟದ ಆರೋಪಿಗಳ ಸುಳಿವು ಸಿಗಬಹುದು ಎಂಬ ವಿಶ್ವಾಸ ಪೊಲೀಸರಿಗಿದೆ.  ಇನ್ನೊಂದೆಡೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತನಿಗಾಗಿ ಪೊಲೀಸರು ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ