ಭವಾನಿ ರೇವಣ್ಣ ವಿಚಾರಣೆಗೆ ಬಂದ ಎಸ್ಐಟಿ: ಎಲ್ಲಿ ಹೋದರಪ್ಪಾ ಕೋಟಿ ಕಾರಿನ ಒಡತಿ

Krishnaveni K

ಶನಿವಾರ, 1 ಜೂನ್ 2024 (12:34 IST)
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣರನ್ನು ವಿಚಾರಣೆ ಮಾಡಲು ಎಸ್ಐಟಿ ತಂಡ ಅವರ ನಿವಾಸಕ್ಕೆ ಆಗಮಿಸಿದೆ.

ಪ್ರಜ್ವಲ್ ರೇವಣ್ಣರಿಂದ ಕಿರುಕುಳಕ್ಕೊಳಗಾದ ಮಹಿಳೆಯನ್ನು ರೇವಣ್ಣ ದಂಪತಿ ಆದೇಶದ ಮೇರೆ ಭವಾನಿ ರೇವಣ್ಣ ಸಂಬಂಧಿ ಅಪಹರಣ ಮಾಡಿದ್ದರು ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಚ್ ಡಿ ರೇವಣ್ಣ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಭವಾನಿ ರೇವಣ್ಣ ಸಂಬಂಧಿಯೂ ಬಂಧನಕ್ಕೊಳಗಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗಲು ಭವಾನಿಗೆ ಎಸ್ಐಟಿ ತಂಡ ಎರಡು ಬಾರಿ ನೋಟಿಸ್ ನೀಡಿತ್ತು. ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೇ ಭವಾನಿಗೂ ಬಂಧನದ ಭೀತಿ ಎದುರಾಗಿತ್ತು. ಆದರೆ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಆದರೆ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಎಸ್ಐಟಿ ಇಂದು ವಿಚಾರಣೆಗೆ ಕರೆ ನೀಡಿದೆ. ಭವಾನಿ ರೇವಣ್ಣ ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿದ ಕಾರಣಕ್ಕೆ ಸ್ವತಃ ಎಸ್ಐಟಿ ತಂಡ ಅವರ ಹೊಳೆನರಸೀಪುರ ನಿವಾಸಕ್ಕೆ ವಿಚಾರಣೆಗೆ ಬರುವುದಾಗಿ ತಿಳಿಸಿತ್ತು. ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮಯವನ್ನೂ ಕೇಳಿದೆ.

ಆದರೆ ಹೊಳೆನರಸೀಪುರ ನಿವಾಸಕ್ಕೆ ಎಸ್ಐಟಿ ತಂಡ ಆಗಮಿಸಿದೆ. ಆದರೆ ಅಲ್ಲಿ ಭವಾನಿ ರೇವಣ್ಣ ಸುಳಿವಿಲ್ಲ. ಸಂಜೆ 5 ಗಂಟೆಯವರೆಗೆ ಸಮಯಾವಕಾಶವಿದ್ದು, ಅದಾದ ಬಳಿಕ ವಿಚಾರಣೆ ಎದುರಿಸಲು ವಿಫಲರಾದರೆ ಭವಾನಿ ಬಂಧನಕ್ಕೊಳಗಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ