ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಇದೀಗ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿದೆ.
ವಿಶೇಷವೆಂದರೆ ಆಸ್ಪತ್ರೆಗೆ ಕರೆತರುವಾಗಲೂ ಮಹಿಳಾ ಎಸ್ಐಟಿ ಅಧಿಕಾರಿಗಳ ತಂಡವೇ ಪ್ರಜ್ವಲ್ ರನ್ನು ಕರೆತಂದಿದೆ. ಪ್ರಜ್ವಲ್ ನಿನ್ನೆ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೇ ಕಾದು ಕುಳಿತಿದ್ದ ಎಸ್ ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ನಿನ್ನೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೇ ಎಸ್ ಐಟಿ ಅಧಿಕಾರಿಗಳ ವಾಹನದಲ್ಲೇ ಅವರನ್ನು ಕರೆದೊಯ್ಯಲಾಯಿತು. ಈ ವೇಳೆ ವಾಹನದಲ್ಲಿ ಐವರು ಮಹಿಳಾ ಅಧಿಕಾರಿಗಳಿದ್ದರು. ಒಬ್ಬ ಚಾಲಕನನ್ನು ಬಿಟ್ಟರೆ ವಾಹನದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಗಳೇ ಇದ್ದರು.
ಇದೇ ಮಹಿಳಾ ಅಧಿಕಾರಿಗಳ ತಂಡವೇ ಇಂದು ಪ್ರಜ್ವಲ್ ನನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆತಂದಿದೆ. ಸಂತ್ರಸ್ತ ಮಹಿಳೆಯರು ಧೈರ್ಯವಾಗಿ ದೂರು ನೀಡಬಹುದು ಎಂದು ಸಂದೇಶ ನೀಡುವ ಸಲುವಾಗಿ ಈ ರೀತಿ ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ.