ಬೆಂಗಳೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಜನ ಕೋಳಿ ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಮಟನ್ ಗೆ ಭಾರೀ ಡಿಮ್ಯಾಂಡ್ ಬಂದಿದೆ.
ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸಾವಿರಾರು ಕೋಳಿಗಳ ಮಾರಣಹೋಮ ನಡೆಸಲಾಗಿದೆ. ಅಲ್ಲದೆ ಚಿಕನ್ ಉತ್ಪನ್ನಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಈ ನಡುವೆ ಜನರೇ ಸ್ವಯಂ ಪ್ರೇರಿತರಾಗಿ ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈಗ ಚಿಕನ್ ಗೆ ಬೇಡಿಕೆ ಕುಸಿದಿದೆ. ಆದರೆ ಮಾಂಸಪ್ರಿಯರು ಮಟನ್ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಮಟನ್ ಬೆಲೆಯಲ್ಲಿ ಏರಿಕೆಯಾಗಿದೆ.
ಚಿಕನ್ ಗೆ ಪ್ರತೀ ಕೆ.ಜಿ.ಗೆ 20 ರಿಂದ 40 ರೂ.ಗಳಷ್ಟು ಇಳಿಕೆಯಾಗಿದ್ದರೆ ಮಟನ್ ಗೆ 50 ರೂ.ಗಳಷ್ಟು ಏರಿಕೆಯಾಗಿದೆ. ದರ ಏರಿಕೆಯಾಗಿದ್ದರೂ ಮಾಂಸ ತಿನ್ನದೇ ಇರಲಾರೆ ಎನ್ನುವವರು ದುಬಾರಿ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಿದ್ದಾರೆ.