ಬೆಂಗಳೂರು: ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಅಮಿಷವೊಡ್ಡಲು ಅಕ್ರಮವಾಗಿ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಇದೀಗ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದೆ.
ಬೆಂಗಳೂರು ವಿಧಾನಪರಿಷತ್ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಮೋಜಿ ಗೌಡ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಗಿಫ್ಟ್‍ಗಳನ್ನು ಹಂಚುತ್ತಿದ್ದಾರೆ ಎಂದು ಬಿಜೆಪಿ ನಿಯೋಗ ಆಕ್ಷೇಪಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ನಿಯೋಗವು ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿತು. ಈ ಉಡುಗೊರೆಗಳ ಸಮೇತ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ಸಾಕ್ಷ್ಯ ಸಮೇತ ದೂರು ನೀಡಿದ್ದಾರೆ.
ಖಾಸಗಿ ಕೊರಿಯರ್ ಏಜೆನ್ಸಿಯ ಗೋದಾಮಿನಲ್ಲಿ ಈ ಉಡುಗೊರೆಗಳನ್ನು ಶೇಖರಿಸಿ ಇಡಲಾಗಿದೆ. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ನಿಯೋಗ ಕೋರಿದೆ.
ನಿಯೋಗದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.