ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘಿಸಿದ ನೆಪ ನೀಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಬಿಜೆಪಿ ಶಿಸ್ತು ಸಮಿತಿ ಉಚ್ಛಾಟನೆ ಮಾಡಿದೆ. ಇದದರೊಂದಿಗೆ ಮತ್ತೊಬ್ಬ ಕಟ್ಟಾ ಹಿಂದೂವಾದಿ ನಾಯಕ ಬಿಜೆಪಿಯಿಂದ ಔಟ್ ಆದಂತಾಗಿದೆ.
ಈ ಮೊದಲು ಅನಂತಕುಮಾರ್ ಹೆಗ್ಡೆ ಕಟ್ಟಾ ಹಿಂದುತ್ವವಾದಿ ನಾಯಕರಾಗಿದ್ದರು. ಅವರ ಮಾತುಗಳು ಸದಾ ವಿವಾದಗಳನ್ನೇ ಸೃಷ್ಟಿಸುತ್ತಿದ್ದವು. ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರ್ ನಾಲಿಗೆಯೇ ಕೆಲವೊಮ್ಮೆ ಬಿಜೆಪಿಗೆ ಇರಿಸುಮುರಿಸು ತರಿಸುತ್ತಿತ್ತು. ಅವರನ್ನು ನಿಧಾನವಾಗಿ ಕಡೆಗಣಿಸಿದ ಬಿಜೆಪಿ ಕೊನೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದೇ ಸಂಪೂರ್ಣ ಮೂಲೆಗುಂಪು ಮಾಡಿತು.
ಇದಾದ ಬಳಿಕ ಕೆಎಸ್ ಈಶ್ವರಪ್ಪ ರಾಜ್ಯ ನಾಯಕರ ಪೈಕಿ ಹಿಂದುತ್ವವಾದಿಯಾಗಿ ಗುರುತಿಸಿಕೊಂಡಿದ್ದರು. ಅವರೂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದರು. ಇಬ್ಬರೂ ಶಿವಮೊಗ್ಗದ ನಾಯಕರೇ. ಮೊದಲಿನಿಂದಲೂ ಇಬ್ಬರ ನಡುವೆ ಒಳಗೊಳಗೇ ಜಿದ್ದಾಜಿದ್ದಿ ಇದ್ದಿದ್ದು ಗುಟ್ಟೇನೂ ಅಲ್ಲ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದೇ ಇದ್ದಿದ್ದಕ್ಕೆ ಯಡಿಯೂರಪ್ಪ ಮೇಲೆ ಬಹಿರಂಗವಾಗಿಯೇ ಕಿಡಿ ಕಾರಿದ್ದರಿಂದ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು.
ತಮ್ಮ ಮಾತಿನಿಂದಲೇ ಬೆಂಕಿ ಉಗುಳುತ್ತಿದ್ದ ಪ್ರತಾಪ್ ಸಿಂಹಗೂ ಟಿಕೆಟ್ ಕೊಡದೇ ಮೂಲೆಗುಂಪು ಮಾಡಲಾಯಿತು. ಈಗ ಬಸನಗೌಡ ಪಾಟೀಲ್ ಯತ್ನಾಳ್ ಸರದಿ. ಇದೀಗ ಯತ್ನಾಳ್ ರನ್ನೂ ಬಿಜೆಪಿಯಿಂದ ಹೊರಹಾಕಲಾಗಿದೆ. ಆ ಮೂಲಕ ಈಗ ಬಿಜೆಪಿಯಲ್ಲಿ ಗಟ್ಟಿ ಧ್ವನಿಯೇ ಇಲ್ಲದಂತಾಗಿದೆ.
ಇದು ಕಟ್ಟಾ ಬಿಜೆಪಿ ಬೆಂಬಲಿಗರನ್ನು ಕೆರಳಿಸಿದೆ. ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಈಗ ಗಟ್ಟಿ ಧ್ವನಿಯಲ್ಲಿ ಮಾತನಾಡುವ ನಾಯಕರೇ ಇಲ್ಲ. ಇದ್ದವರನ್ನೆಲ್ಲಾ ಮೂಲೆಗುಂಪು ಮಾಡುತ್ತಿದ್ದರೆ ಕಾಂಗ್ರೆಸ್ ನ್ನು ಎದುರಿಸುವುದು ಹೇಗೆ ಎಂದು ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಯತ್ನಾಳ್, ಈಶ್ವರಪ್ಪ ಮುಂತಾದವರ ಅಮಾನತು ಪಕ್ಷಕ್ಕೆ ಮುಂದೊಂದು ದಿನ ಹೊಡೆತ ನೀಡಿದರೂ ಅಚ್ಚರಿಯಿಲ್ಲ. ಯಾಕೆಂದರೆ ಈ ನಾಯಕರಿಗೆ ಅವರದ್ದೇ ಆದ ಪ್ರಬಲ ಬೆಂಬಲಿಗರ ಗುಂಪು ಇದೆ. ಮುಂದೊಂದು ದಿನ ಯತ್ನಾಳ್, ಈಶ್ವರಪ್ಪನವರಂತಹ ಅಸಮಾಧಾನಿತರ ಗುಂಪು ಮತ್ತೊಂದು ಪಕ್ಷ ಕಟ್ಟಲು ಮುಂದಾದರೆ ಅದು ಬಿಜೆಪಿಗೇ ಹೊಡೆತ ನೀಡಲಿದೆ. ಇದರಿಂದ ಮತ ವಿಭಜನೆಯಾಗಿ ಲಾಭವಾಗುವುದು ಕಾಂಗ್ರೆಸ್ ಗೆ. ಪಕ್ಷದ ನಾಯಕರ ಜೊತೆಗೆ ಬೆಂಬಲಿಗರ ಅಸಮಾಧಾನವನ್ನು ಮೀರಿ ವಿಜಯೇಂದ್ರ ಮುಂದೆ ಹೇಗೆ ಪಕ್ಷ ಕಟ್ಟುತ್ತಾರೆ ಎಂದು ನೋಡಬೇಕಿದೆ.