ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದು ಬಿಜೆಪಿ : ರಾಮಲಿಂಗಾರೆಡ್ಡಿ ವಾಗ್ದಾಳಿ
ಶುಕ್ರವಾರ, 13 ಅಕ್ಟೋಬರ್ 2017 (13:36 IST)
ಕಳೆದ 2013 ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬೆಂಗಳೂರು ನಗರವನ್ನು ಗಾರ್ಬೆಜ್ ಸಿಟಿಯಾಗಿಸಿದ್ದರು. ಬಿಬಿಎಂಪಿಯಲ್ಲಿ 8 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಹೋಗಿದ್ದಾರೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳಲಿಲ್ಲ. ರಾಜ್ಯದ ಪ್ರಮುಖ ಐತಿಹಾಸಿಕ ಕಟ್ಟಡಗಳನ್ನು ಒತ್ತೆಯಾಗಿಟ್ಟು ಸಾಲದ ಹಣವನ್ನು ತಿಂದು ತೇಗಿದ್ದಾರೆ ಎಂದು ಗುಡುಗಿದ್ದಾರೆ.
ಬಿಬಿಎಂಪಿಗೆ 8 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಬಿಜೆಪಿ ಮುಖಂಡರು ರಸ್ತೆಗಳ ಅಭಿವೃದ್ಧಿ ಮಾಡಲಿಲ್ಲ, ಇದೀಗ ಮಳೆಯಿಂದಾಗಿ ಬಿದ್ದ ಚಿಲ್ಲರೆ ಗುಂಡಿಗಳ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರಕಾರ ರಸ್ತೆಗಳ ಅಭಿವೃದ್ಧಿಗೆ 2013 ರಿಂದ 2017ರವರೆಗೆ ಬಿಬಿಎಂಪಿಗೆ 3750 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ 1750 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನುಳಿದ 2 ಸಾವಿರ ಕೋಟಿ ರೂಪಾಯಿ ಅನುದಾನ ವೆಚ್ಚ ಮಾಡಬೇಕಾಗಿದೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.