ಬೆಂಗಳೂರು ನಗರ ಉಸ್ತುವಾರಿಗಾಗಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗಾಗಲೇ ಬೀದಿಗೆ ಬಂದಿದೆ. ಈಗ ಇದೇ ಉಸ್ತುವಾರಿ ಜಟಾಪಟಿ ಸಂಪುಟವನ್ನೇ ಹೋಳಾಗಿಸುವ ಸೂಚನೆ ನೀಡಿದೆ. ಏಕೆಂದರೆ, ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಮತ್ತೊಬ್ಬ ಸಚಿವರು ತುಪ್ಪ ಸುರಿದಿದ್ದಾರೆ.
ಇದರ ಜೊತೆ ಬಿಜೆಪಿಯಲ್ಲಿ ಮೂಲ-ವಲಸಿಗ ಚರ್ಚೆಯೂ ಮತ್ತೆ ಮುನ್ನಲೆಗೆ ಬಂದಿದೆ.
ಹೌದು, ಕಳೆದೊಂದು ವಾರದಿಂದ ಬೆಂಗಳೂರು ನಗರ ಉಸ್ತುವಾರಿಗಾಗಿ ಸಚಿವರಾದ ವಿ. ಸೋಮಣ್ಣ ಮತ್ತು ಆರ್.ಅಶೋಕ್ ಮಧ್ಯೆ ವಾತಿನ ಯುದ್ಧ ಆರಂಭವಾಗಿತ್ತು. ಮಹಾನಗರದ ಪಟ್ಟವನ್ನ ನನಗೆ ನೀಡಿ ಎನ್ನವಂತೆ ವಿ.ಸೋಮಣ್ಣ ನೇರವಾಗಿ ಬೇಡಿಕ ಇಟ್ಟಿದ್ದರು. ಆದರೆ, ಆರ್. ಅಶೋಕ್ ನಾನೇನು ಬೆಂಗಳೂರು ಉಸ್ತುವಾರಿಗಾಗಿ ಕಾಯುತ್ತಿಲ್ಲ ಎನ್ನುತ್ತಲೇ ಸಿಎಂ ಬಳಿ ತನಗೆ ನೀಡುವಂತೆ ಮಸಲತ್ತು ನಡೆಸುತ್ತಿದ್ದರು.
ಬೆಂಗಳೂರು ನಗರದ ಮೇಲೆ ಆಧಿಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿದೆ. ಹಿರಿಯ ಸದಸ್ಯ ಆಗಿರುವ ವಿ. ಸೋಮಣ್ಣ ಹಾಗೂ ಆರ್ ಅಶೋಕ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾದಿ ಬೀದಿ ರಂಪಾಟ ಕೂಡ ಮಾಡಿಕೊಂಡಿದ್ದಾರೆ. ಆರ್. ಅಶೋಕ್ ಬಗ್ಗೆ ನೇರ ವಾಗ್ದಾಳಿ ನಡೆಸಿರುವ ಸೋಮಣ್ಣ, ನಾನು ಸಚಿವನಾದಾಗ ಸಾಮ್ರಾಟ್ ಆರ್ ಅಶೋಕ್ ಇನ್ನೂ ಶಾಸಕನಾಗಿ ಇರಲಿಲ್ಲ. ಹಿರಿಯನಿದ್ದೇನೆ, ಬೆಂಗಳೂರು ಉಸ್ತುವಾರಿ ಕೊಟ್ಟರೆ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದಿದ್ದಾರೆ.