ಬೆಂಗಳೂರು: ನಮ್ಮ ಅವಧಿಯಲ್ಲಿ 40% ಕಮಿಷನ್ ಆರೋಪದ ಬಗ್ಗೆ ಆಯೋಗ ರಚಿಸಿ ಕಾಂಗ್ರೆಸ್ ಸರ್ಕಾರ ತನಿಖೆ ಮಾಡಲು ಹೊರಟಿದೆ. ಆದರೆ ಅವರಲ್ಲೇ 60% ಕಮಿಷನ್ ವಾಸನೆ ಹೊಡೀತಿದೆ ಎಂದು ಬಿಜೆಪಿ ಕಟು ಟೀಕೆ ಮಾಡಿದೆ.
ಬಿಜೆಪಿ ಅಧಿಕಾರಾವಧಿಯಲ್ಲಿ 40% ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಆರೋಪಗಳಿಗೆ ಮತ್ತೊಂದು ಸಮಿತಿ ರಚಿಸಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿರುವುದಕ್ಕೆ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿದೆ. ಈಗಾಗಲೇ ಒಂದು ಸಮಿತಿ ಯಾವುದೇ ಹುರುಳಿಲ್ಲ ಎಂದರೂ ಯದ್ವಾ ತದ್ವಾ ನಮ್ಮ ಮೇಲೆ ಆರೋಪ ಹೊರಿಸಿಯೇ ತೀರುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿ ಜನರ ದುಡ್ಡು ಪೋಲು ಮಾಡಲು ಹೊರಟಿದೆ ಎಂದು ಟೀಕಿಸಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಹೊರಿಸಿದ್ದ 40% ಆರೋಪವನ್ನು ವಿಪಕ್ಷದಲ್ಲಿದ್ದಾಗ ಬಿಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಸಾಬೀತು ಮಾಡಲು ಸಾಧ್ಯವಾಗಿಲ್ಲ.
ಬಿಜೆಪಿಯನ್ನು 40% ಆರೋಪದ ಒಳಗೆ ಫ್ರೇಮ್ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಈಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಪರಿಶೀಲಿಸಲು ಮತ್ತೊಂದು ಸಮಿತಿ ರಚಿಸಿದೆ.
ಬಿಜೆಪಿ ಮೇಲೆ ದ್ವೇಷ ಸಾಧಿಸಲು ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಮಾತ್ರವಲ್ಲ ಸಮಿತಿ, ಆಯೋಗ ರಚನೆಯ ಹಿಂದೆ ಸಿಎಂ ಸಿದ್ದರಾಮಯ್ಯ ಸರ್ಕಾರದ 60% ಕಮಿಷನ್ ವಾಸನೆಯಿದೆ. ತಮ್ಮ 60% ಲೂಟಿಯನ್ನು, ಅಕ್ರಮಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲಿನ ಸುಳ್ಳಾರೋಪವನ್ನು ಮುನ್ನೆಲೆಗೆ ತರುತ್ತಿದೆ ಎಂದು ಬಿಜೆಪಿ ಕಟು ಟೀಕೆ ಮಾಡಿದೆ.