ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ಭಯ ಶುರುವಾಗಿದೆ: ಛಲವಾದಿ ನಾರಾಯಣಸ್ವಾಮಿ

Krishnaveni K

ಶನಿವಾರ, 13 ಸೆಪ್ಟಂಬರ್ 2025 (16:56 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿಂತಿದೆ. ಒಂದು ಕಡೆ ಓಲೈಕೆ ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಿಂತ ಹೆಚ್ಚು ಇವರಿಗೆ ಭಯ ಪ್ರಾರಂಭವಾಗಿದೆ. ಏಕೆಂದರೆ ಅಲ್ಪಸಂಖ್ಯಾತರನ್ನು ನಿಯಂತ್ರಣ ಮಾಡುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಗಣೇಶೋತ್ಸವಗಳನ್ನು ಮಾಡುವುದಕ್ಕೆ ಅವಕಾಶಕೊಡದೆ ದೊಡ್ಡ ದೊಡ್ಡ ರಾದ್ಧಾಂತಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ದೂರಿದರು.
 
ಹಿಂದಿನ ಪದ್ಧತಿಗಳಂತೆ ಗಣೇಶೋತ್ಸವಗಳು ಯಾವಾಗಲೂ ನಡೆದುಕೊಂಡು ಬರುತ್ತಿದೆ.  ಎಂದೂ ಗಲಾಟೆಗಳು ಆಗಿರಲಿಲ್ಲ. ಸರ್ಕಾರ ಮತಬ್ಯಾಂಕಿನ ಕಾರಣಕ್ಕೆ ಅವರನ್ನು ಓಲೈಕೆ ಮಾಡುವ ನೆಪದಿಂದ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವ ಅಲ್ಪಸಂಖ್ಯಾತರ ಕೇಸುಗಳನ್ನು ವಾಪಸ್ ಪಡೆದು ಅವರಿಗೆ ಶಾಂತಿದೂತ ಪಟ್ಟಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದರು. ಆ ತಕ್ಷಣವೇ ಇಡೀ ರಾಜ್ಯದಲ್ಲಿ ನೆಮ್ಮದಿ ಕೆಡಸುವ ಕೆಲಸ ಆ ಜನರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 
ಈ ಸರ್ಕಾರ ಹಿಂದುತ್ವ ವಿರೋಧಿ
ಸಂವಿಧಾನ ಇರುವುದು ಯಾರನ್ನೋ ಓಲೈಕೆ ಮಾಡುವುದಕ್ಕೆ ಮತ್ತು ಯಾರನ್ನೋ ತುಳಿಯುವುದಕ್ಕೆ ಅಲ್ಲ. ಸರ್ವರನ್ನೂ ಒಳ್ಳೆಯ ರೀತಿಯ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಈ ಸರ್ಕಾರ ಹಿಂದುತ್ವ ವಿರೋಧಿ ಎಂದು ದೂರಿದರು. 

ಸರ್ಕಾರ ಅಲಿಖಿತ ಕಾನೂನು ಮಾಡಿದೆ. ಎಲ್ಲ ತಾಲ್ಲೂಕು ಮತ್ತು ಜಿಲ್ಲೆಗಳಲ್ಲೂ ಗಣೇಶನ ಉತ್ಸವಕ್ಕೆ ಅವಕಾಶ ಕೋಡಬೇಡಿ ಎಂದು ಪೊಲೀಸ್ ಇಲಾಖೆಗೆ ಸುತ್ತೋಲೆ ಹೊರಡಿಸದೆ ಮಾತಿನಲ್ಲಿ ಹೇಳಿದ್ದಾರೆ ಎಂದು ದೂರಿದರು. ಅನುಮತಿ ಕೊಡದಿರುವುದಕ್ಕೆ ನೀವು ಯಾರು?; ನಿಮಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಹತ್ತಿಕ್ಕುವ ಕೆಲಸ ಸರ್ಕಾರ ಮಾಡುವುದು ಸರಿ ಇದೆಯೇ ಎಂದು ಕೇಳಿದರು.
 
ಇಂದು ಓಲೈಕೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಶಿವಾಜಿನಗರ ಅತ್ಯಂತ ಹಳೆಯ ಮತ್ತು  ಇಡೀ ದೇಶಕ್ಕೆ ಗೊತ್ತಿರುವ ಹೆಸರು. ಆದರೆ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರು ಇಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಈ ವಿಚಾರವಾಗಿ ಸರ್ಕಾರ ಶಿವಾಜಿ ಎನ್ನುವವರು ಕರ್ನಾಟಕದವರು ಅಲ್ಲ ಎಂದು ಹೇಳಿಕೆ ನೀಡಿದ್ದಾರೆ; ಸೈಂಟ್ ಮೇರಿ ಯಾವ ದೇಶದವರು?; ಅವರು ಶಿವಾಜಿನಗರದವರೇ, ಕರ್ನಾಟಕದವರೇ ಎಂದು ಪ್ರಶ್ನಿಸಿದರು. 
 
ಸರ್ಕಾರ ಜನ ಮೆಚ್ಚುವ ಕೆಲಸ ಮಾಡಬೇಕೇ ಹೊರತು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ಸರ್ಕಾರಗಳು ಮುಂದೆ ಕೆಲಸ ಮಾಡುವುದಕ್ಕೆ ಕಷ್ಟವಾಗುತ್ತದೆ ಎಂದು ತಿಳಿಸಿದರು. ಸರ್ಕಾರ ಕೆಟ್ಟದಾರಿ ತುಳಿಯುತ್ತಿದೆ; ಅದರಿಂದ ಹೊರಬಂದು ಸಂವಿಧಾನದ ದಾರಿಯಲ್ಲಿ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
 
50 ಲಕ್ಷ ರೂ. ಪರಿಹಾರ ಘೋಷಣೆಗೆ ಆಗ್ರಹ
ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ಹರಿದು 8 ರಿಂದ 9 ಜನ ಸಾವಿಗೀಡಾಗಿರುವುದು ಹಾಗೂ ಸುಮಾರು ಜನರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು ಬಹಳ ನೋವಾಗಿದೆ ಎಂದು ತಿಳಿಸಿದರು. ಈಗಾಗಲೇ ನಮ್ಮ ಪಕ್ಷದ ಮುಖಂಡರಾದ ಆರ್. ಅಶೋಕ್, ಸಿ.ಟಿ. ರವಿ, ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾರಣಾಂತರದಿಂದ ನಾನು ಹೋಗುವುದಕ್ಕೆ ಆಗಲಿಲ್ಲ ಎಂದು ತಿಳಿಸಿದರು.

ದೇಶದ ಪ್ರಧಾನ ಮಂತ್ರಿಗಳು ಕೂಡ ಹಾಸನ ಜಿಲ್ಲೆಯ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರ ನಿಧಿಯಿಂದ ಹಣವನ್ನು ಘೋಷಣೆ ಮಾಡಿದ್ದಾರೆ. ಇಂತಹ ಅಚಾತುರ್ಯ ನಡೆಯಬಾರದಿತ್ತು. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 50 ಲಕ್ಷ ರೂಗಳ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
 
ದಲಿತರ ಬದುಕನ್ನು ಹಸನು ಮಾಡಬೇಕು ಎನ್ನುವ ಭಾವನೆ ಸರ್ಕಾರಕ್ಕೆ ಇಲ್ಲ. ಮತಬ್ಯಾಂಕಿಗಾಗಿ ದಲಿತರ ಪರ ಎನ್ನುತ್ತಾರೆ. ಅಲ್ಪಸಂಖ್ಯಾತರಿಗೆ ಬಹುಮಾನ, ದಲಿತರಿಗೆ ಅವಮಾನ. ಇದು ಕಾಂಗ್ರೆಸ್ಸಿನ ಇಬ್ಬಗೆಯ ನೀತಿಯಾಗಿದೆ ಎಂದು ಆರೋಪಿಸಿದರು. ಇದರ ವಿರುದ್ಧವಾಗಿ ದಲಿತರು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರೆನೀಡಿದರು.
 
ಮುಸ್ಲಿಂ ಕಾಲೋನಿಗಳನ್ನು ಸುಮಾರು 400 ಕೋಟಿ ರೂಗಳಲ್ಲಿ ಸುಭದ್ರಗೊಳಿಸುವುದು ಹಾಗೂ ಉತ್ತಮಗೊಳಿಸುವುದು; ದಲಿತ ಸಮುದಾಯಗಳು ವಾಸಿಸುವ ಕೊಳಚೆ ಪ್ರದೇಶಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು. ಸರ್ಕಾರ ಸಂವಿಧಾನದ ಹೆಸರಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಮತ್ತು ದಲಿತರಿಗೆ ದೋಖಾ ಮಾಡುತ್ತಿದ್ದಾರೆ ಎಂದು ದೂರಿದರು.
 
ಸೋನಿಯಾ ಗಾಂಧಿ ಓಲೈಕೆಗೆ ಜಾತಿ ಜಾತಿಗೂ ಕ್ರೈಸ್ತರ ಜೋಡಣೆ 

ಜಾತಿಗಣತಿ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಆಡಳಿತ ಸರ್ಕಾರಕ್ಕೆ ಆಸ್ತಿಕ ಮತ್ತು ನಾಸ್ತಿಕರನ್ನು ಹುಡುಕುವ ಕೆಲಸ ಬೇಕೇ ಎಂದು ಪ್ರಶ್ನಿಸಿದರು. ಒಕ್ಕಲಿಗ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಬ್ರಾಹ್ಮಣ ಕ್ರೈಸ್ತರು, ದಲಿತ ಕ್ರೈಸ್ತರು ಈ ರೀತಿಯ ಜಾತಿ ಇದೆಯೇ?; ಆದರೆ ಇದರ ಅರ್ಥವೇನೆಂದರೆ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿಯವರನ್ನು ಓಲೈಕೆ ಮಾಡುವುದಕ್ಕಾಗಿ ಜಾತಿ ಜಾತಿಗೂ ಕ್ರೈಸ್ತರನ್ನು ಜೋಡಿಸುತ್ತಿದೆ ಎಂದು ಆರೋಪಿಸಿದರು.

ಯಾವ ಜಾತಿಯವರು ಕ್ರೈಸ್ತರಾಗಿ ಮತಾಂತರ ಆಗಿದ್ದರೆ ಅವರು ಕ್ರೈಸ್ತರಾಗುತ್ತಾರೆ. ಆದರೆ ಅವರು ಯಾವ ಜಾತಿಯಿಂದ ಕ್ರೈಸ್ತರಾಗಿದ್ದಾರೆ ಎಂಬುದು ನಿಮಗೆ ಏಕೆ ಬೇಕಾಗಿದೆ ಎಂದು ಪ್ರಶ್ನಿಸಿದರು. ಈ ಕಾಂಗ್ರೆಸ್ ಸರ್ಕಾರ ಮತಾಂತರವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು. 
 
ನಾಸ್ತಿಕ ಮತ್ತು ಆಸ್ತಿಕ ಜನಗಣತಿಯಲ್ಲಿ ಬರಬೇಕಾಗಿಲ್ಲ. ಅದು ವ್ಯಕ್ತಿ ವ್ಯಕ್ತಿಗಳ ಮಧ್ಯದಲ್ಲಿರುವ ನಡವಳಿಕೆ. ಎಷ್ಟೋ ಜನ ನಾಸ್ತಿಕರು ಆಸ್ತಿಕರಾಗಿದ್ದಾರೆ; ಆಸ್ತಿಕರು ನಾಸ್ತಿಕರೂ ಆಗಿದ್ದಾರೆ. ತಿಳಿವಳಿಕೆ ಇಲ್ಲದ ಸಂದರ್ಭದಲ್ಲಿ ಕೆಲವರು ಯಾವುದೋ ವಿಚಾರವನ್ನು ಹೀಯಾಳಿಸುವುದು ಮತ್ತು ವಿರೋಧಿಸುವುದು ಸಹಜ. ಅದು ಅರಿವಿಗೆ ಬಂದ ಮೇಲೆ ಅವರು ಕೂಡ ಪರಿವರ್ತನೆ ಆಗುವ ಸಂದರ್ಭಗಳನ್ನು ನಾವು ಗಮನಿಸಿದ್ದೇವೆ ಎಂದು ವಿವರಿಸಿದರು.

ಈ ಸರ್ಕಾರ ಜನರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆಯೇ ಹೊರತು. ಸಮಾಜವನ್ನು ಉತ್ತಮಗೊಳಿಸಬೇಕು ಮತ್ತು ಒಳ್ಳೆಯ ರೀತಿಯಲ್ಲಿ ನಡೆಸಬೇಕು ಅನ್ನುವ ಭಾವನೆ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಇಂದು ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಸನ್ನು ಜನ ತಿರಸ್ಕಾರ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಈ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಬೇಕು ಎಂದು ಜನ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು. 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ