ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಕ್ಕೇ ದ್ರೋಹ ಬಗೆದ ಶಾಸಕರಾದ ಎಸ್.ಟಿ. ಸೋಮೇಶಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆ.
ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದರೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಮಾಡಿದ್ದಾರೆ. ಇನ್ನೊಂದೆಡೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದರು.
ಈ ಇಬ್ಬರೂ ಶಾಸಕರ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ‍್ಳಲಿದೆ. ಈ ಇಬ್ಬರೂ ಶಾಸಕರ ವಿರುದ್ಧ ಸ್ಪೀಕರ್ ಗೆ ದೂರು ಸಲ್ಲಿಸಿರುವ ಬಿಜೆಪಿ ಇಬ್ಬರನ್ನೂ ಅನರ್ಹಗೊಳಿಸಬೇಕು ಎಂದು ಮನವಿ ಸಲ್ಲಿಸಬಹುದಾಗಿದೆ. ಇದರಿಂದ ಇಬ್ಬರ ಶಾಸಕ ಸ್ಥಾನಕ್ಕೆ ಕುತ್ತು ಬರಬಹುದು.
ಶಾಸಕ ಎಸ್.ಟಿ. ಸೋಮಶೇಖರ್ ಈಗಾಗಲೇ ಬಹುತೇಕ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಹೆಚ್ಚು ಕಡಿಮೆ ಬಿಜೆಪಿ ಬಿಡುವ ಸುಳಿವು ನೀಡಿದ್ದರು. ಶಿವರಾಂ ಹೆಬ್ಬಾರ್ ಕೂಡಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳಿತ್ತು. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಇಬ್ಬರಿಗೂ ನೋಟಿಸ್ ನೀಡಿ ಸ್ಪಷ್ಟನೆ ನೀಡಿದ ಬಳಿಕ ಕ್ರಮ ಕೈಗೊಳ್ಳುವ ಸಾಧ‍್ಯತೆಯೂ ಇಲ್ಲದಿಲ್ಲ. ಹಾಗಿದ್ದರೂ ಬಿಜೆಪಿ ದೂರು ಸಲ್ಲಿಸಿದರೆ ಸ್ಪೀಕರ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಇಬ್ಬರ ಭವಿಷ್ಯ ತೀರ್ಮಾನವಾಗಲಿದೆ.