ಎನ್ ಪಿಎಸ್ ರದ್ಧತಿಗೆ ಆಗ್ರಹಿಸಿ ಸರಕಾರಿ ನೌಕರರು ಮಾಡಿದ್ದೇನು ಗೊತ್ತಾ?

ಬುಧವಾರ, 3 ಅಕ್ಟೋಬರ್ 2018 (15:27 IST)
ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿಂದು ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದಿಂದ ವಿನೂತನ ಪ್ರತಿಭಟನೆ ನಡೆಯಿತು.

ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಘೋಷ ವಾಕ್ಯದಡಿ ರಕ್ತದಾನ ಅಭಿಯಾನ ನಡೆಯಿತು. ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣಸ್ವಾಮೀಜಿ ರಕ್ತದಾನಕ್ಕೆ ಚಾಲನೆ ನೀಡಿದರು. ಸರ್ಕಾರಿ ನೌಕರಿ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ಜನವರಿ 1, 2004 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 2006 ಏಪ್ರಿಲ್ 4 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿಯನ್ನು ರದ್ದುಪಡಿಸಿ ಅದರ ಬದಲು ನೂತನ ಪಿಂಚಣಿ ಯೋಜನೆ ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ವಂತಿಗೆ ಆಧಾರಿತ ಪಿಂಚಣಿ ಯೋಜನೆಯ ಸಮಸ್ಯೆಗಳು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದ್ದು, ಅನೇಕ ನೌಕರರು ಈಗಾಗಲೇ ಮರಣ ಹೊಂದಿದ್ದಾರೆ. ಅವರ ಕುಟುಂಬಗಳು ಕಷ್ಟದ ಪರಿಸ್ಥಿತಿಗೆ ದೂಡಲ್ಪಟ್ಟಿರುವುದು ವಿಷಾದನೀಯ ಸಂಗತಿ ಎಂದರು.

ನೌಕರರ ಸಂಘದ ಸದಸ್ಯರಾದ ಡಾ.ರಾಜಶೇಖರ ಗಾಣಿಗೇರ, ಶಿವಾಜಿರಾವ್, ಶಿವಲಿಂಗಪ್ಪ ಹಂದಿಹಾಳು, ಎನ್.ರಮೇಶ, ಜಿ.ವೈ.ತಿಪ್ಪಾರೆಡ್ಡಿ, ಎ.ಎಸ್.ಭೂಮೇಶ್ವರ, ಬಿ.ಜಿ.ಶಿವಾನಂದ, ಕೆ.ಹೊನ್ನೂರುಸ್ವಾಮಿ ಇದ್ದರು.

ಜಿಲ್ಲೆಯ ಹೊಸಪೇಟೆ, ಸಂಡೂರು, ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನಾದ್ಯಂತ ಎನ್ ಪಿಎಸ್ ನೌಕರರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಅಂದಾಜು 6800 ಎನ್ ಪಿಎಸ್ ನೌಕರರಿದ್ದು, ಈವರೆಗೆ ನೂರಾರು ನೌಕರರು ರಕ್ತದಾನ ಮಾಡಿದ್ದಾರೆ. ಸರಿ ಸುಮಾರು 61,000 ಯುನಿಟ್ ರಕ್ತ ಸಂಗ್ರಹಿಸಿ ಗಿನ್ನಿಸ್ ದಾಖಲಿಸುವ ಗುರಿಯಿದೆ. ರಾಜ್ಯವ್ಯಾಪಿ 1,80,000 ನೌಕರರಿದ್ದು, ರಾಜ್ಯದೆಲ್ಲೆಡೆ ಒಂದು ಲಕ್ಷಕ್ಕೂ ಅಧಿಕ ನೌಕರರು ರಕ್ತದಾನ ಮಾಡುವ ಗುರಿಯನ್ನು ಹೊಂದಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ