ನಾಳೆ ಸುಪ್ರೀಂನಲ್ಲಿ ಗಡಿ ವಿವಾದದ ವಿಚಾರಣೆ
ಮಹಾರಾಷ್ಟ್ರ ಗಡಿಯಲ್ಲಿರುವ ಕರ್ನಾಟಕದ ಪ್ರಮುಖ ಪಟ್ಟಣ ನಿಪ್ಪಾಣಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ನೇತೃತ್ವದಲ್ಲಿ ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಪಟ್ಟಣದ ಸರ್ಕೀಟ್ ಹೌಸ್ನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅಲೋಕ್ ಕುಮಾರ್, ಕಳೆದ ವಾರ ಕರ್ನಾಟಕ ಸಾರಿಗೆ ನಿಗಮದ ಬಸ್ಗಳ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಿ ಮಸಿ ಬಳಿಯಲಾಗಿತ್ತು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯಬಾರದು ಎಂದು ತಾಕೀತು ಮಾಡಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ನಾಳೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅಶಾಂತಿಗೆ ಇದು ಕಾರಣವಾಗಬಾರದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಭೆ ನಡೆಸಲಾಯಿತು ಎಂದು ಹೇಳಿದರು. ಸುಪ್ರೀಂಕೋರ್ಟ್ ಒಂದು ವೇಳೆ ನಾಳೆಯೇ ತೀರ್ಪು ಪ್ರಕಟಿಸಿದರೂ ಏನೂ ಗಲಾಟೆ ಆಗಬಾರದು. ಇದಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಮೂರು ಕಡೆ ಜಂಟಿ ಚೆಕ್ಪೋಸ್ಟ್ ಮಾಡಿದ್ದಾರೆ. ಪ್ರತಿದಿನ 400ಕ್ಕೂ ಹೆಚ್ಚು ಕರ್ನಾಟಕದ ಬಸ್ಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ, ಅಲ್ಲಿಂದ 175ಕ್ಕೂ ಹೆಚ್ಚು ಬಸ್ಗಳು ಕರ್ನಾಟಕಕ್ಕೆ ಬರುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ ಮತ್ತು ಜನರಿಗೆ, ಇಲ್ಲಿ ಅವರ ವಾಹನಗಳಿಗೆ ಮತ್ತು ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.