ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ಸೇರಿದಂತೆ ಮೂವರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಸಂತ್ರಸ್ತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಮೇರೆಗೆ ಇದೀಗ ಮೂವರನ್ನು ಬಂಧಿಸಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಳು. ಮೂಡುಬಿದಿರೆ ಕಾಲೇಜಿನ ಶಿಕ್ಷಕ ನರೇಂದ್ರ ತರಗತಿಗೆ ಬೇಕಾದ ನೋಟ್ಸ್‌ಗಳನ್ನು ನೀಡುವ ನೆಪದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಸ್ನೇಹಿತನ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಎಂಬಾತ ನರೇಂದ್ರ ಜೊತೆಗಿನ ವಿಡಿಯೋವನ್ನು ಬಳಸಿಕೊಂಡು ವಿದ್ಯಾರ್ಥಿನಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನೂ ಮೂರನೇ ಆರೋಪಿ ಅನುಪ್ ತನ್ನ ರೂಂಗೆ ಭೇಟಿ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಹೊಂದಿದ್ದೇನೆ ಎಂದು ಬೆದರಿಕೆ ಹಾಕಿ ನಂತರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ಹಲ್ಲೆಯ ಸರಣಿಯು ಒಂದು ತಿಂಗಳ ಹಿಂದೆ ನಡೆದಿದೆ ಎಂದು ನಂಬಲಾಗಿದೆ, ಆದರೆ ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ ನಂತರವೇ ವಿಷಯ ಬೆಳಕಿಗೆ ಬಂದಿದೆ. ನಂತರ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಔಪಚಾರಿಕ ದೂರನ್ನು ಸಲ್ಲಿಸಲಾಯಿತು.
ಆಯೋಗದ ನಿರ್ದೇಶನದ ಮೇರೆಗೆ ಮಾರತ್ತಹಳ್ಳಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.