ನಾಮಪತ್ರ ಸಲ್ಲಿಕೆಗೆ ಆನೆ ಏರಿ ಬಂದ ಬಿಎಸ್‌ಪಿ ಅಭ್ಯರ್ಥಿ ಚಿನ್ನಪ್ಪ ಚಿಕ್ಕಹಾಗಡೆ

Sampriya

ಶನಿವಾರ, 30 ಮಾರ್ಚ್ 2024 (14:14 IST)
Photo Courtesy X
ರಾಮನಗರ: ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸದ್ಯ ನಾಮಪತ್ರ ಸಲ್ಲಿಕೆ ಜೋರಾಗಿಯೇ ನಡೆಯುತ್ತಿದೆ.  ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಹುಜನ ಸಮಾಜ‌ ಪಕ್ಷದ ಅಭ್ಯರ್ಥಿ (ಬಿಎಸ್ಪಿ) ಚಿನ್ನಪ್ಪ ಚಿಕ್ಕಹಾಗಡೆ ಅವರು, ನಾಮಪತ್ರ ಸಲ್ಲಿಸಲು ಆನೆ ಏರಿ ಬಂದು ಎಲ್ಲರ ಗಮನ ಸೆಳೆದರು.

ಹೌದು ಇಂದು ಜಿಲ್ಲಾಧಿಕಾರಿ ಕಚೇರಿವರಗೆ ಆನೆ ಮೇಲೆ  ಕೂತು ಮೆರವಣಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಅಂದ ಹಾಗೆ ಇದು ನೈಜ ಆನೆಯಲ್ಲ.‌ ಬದಲಿಗೆ, ಯಾಂತ್ರಿಕ ಆನೆ.

ನಗರದ ಎಸ್ಪಿ ಕಚೇರಿ ವೃತ್ತದಿಂದ ಶುರುವಾದ ಮೆರವಣಿಗೆಯಲ್ಲಿ ಚಿನ್ನಪ್ಪ ಅವರು ಯಾಂತ್ರಿಕ ಆನೆ ಏರಿ ಮುಂದೆ ಸಾಗಿದರೆ, ಪಕ್ಷದ ರಾಜ್ಯ ನಾಯಕರು ತೆರದ ವಾಹನದಲ್ಲಿ ಹಿಂಬಾಲಿಸಿದರು. ಬಿರು ಬಿಸಿಲು ಲೆಕ್ಕಿಸದೆ ಪಕ್ಷದ ಕಾರ್ಯಕರ್ತರು ಚಿನ್ನಪ್ಪ ಭಾವಚಿತ್ರ ಹಾಗೂ ಪಕ್ಷದ ಬಾವುಟ ಹಿಡಿದು ಬೆಂಬಲ ಸೂಚಿಸಿದರು.

ಇನ್ನೂ ಮೆರವಣಿಗೆಯೊಂದಕ್ಕು ಡೊಳ್ಳು, ತಮಟೆ ಕಲಾವಿದರು ಸೇರಿದಂತೆ ಜಾನಪದ ಕಲಾ ತಂಡಗಳ ಕಲಾ ಪ್ರಕಾರಗಳು ಇನ್ನಷ್ಟು ಮೆರುಗು ತಂದವು.

ಈ ವೇಳೆ ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ನಾಗೇಶ್, ಹ.ರಾ. ಮಹೇಶ್ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಹಾಗೂ ಸ್ಥಳೀಯ ಮುಖಂಡರು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ