ಕಂಟ್ರೋಲ್ ತಪ್ಪಿ ಮನೆಗೆ ನುಗ್ಗಿದ ಬಸ್: ಮುಂದೇನಾಯ್ತು?

ಗುರುವಾರ, 21 ಫೆಬ್ರವರಿ 2019 (14:34 IST)
ಆ ಮನೆಯಲ್ಲಿದ್ದವರು ಎಲ್ಲರೂ ಮಲಗಿದ್ದರು. ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಬಸ್ ಏಕಾಏಕಿಯಾಗಿ ಆ ಮನೆಗೆ ನುಗ್ಗಿದೆ.

ಚಾಲಕನ ನಿಯಂತ್ರಣ ತಪ್ಪಿ ಎನ್‌ಇಕೆಆರ್‌ಟಿಸಿ ಬಸ್‌ (NEKRTC) ಮನೆಗೆ ನುಗ್ಗಿದ ಘಟನೆ ನಡೆದಿದೆ. ಕಲಬುರ್ಗಿ ತಾಲೂಕಿನ ಹಡಗಿಲ್ ಹಾರುತಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಶ್ರೀಮಂತ್ ಎಂಬವರ ಮನೆಗೆ ಏಕಾಏಕಿ ಬಸ್ ನುಗ್ಗಿದೆ. ಆಗ ಮನೆಯಲ್ಲಿದ್ದವರೆಲ್ಲರೂ ಮಲಗಿದ್ದರು. ಆದರೆ ಬಸ್ ಮನೆಗೆ ನುಗ್ಗಿದ ಸ್ಥಳದಲ್ಲಿ ಯಾರೂ ಮಲಗಿರಲಿಲ್ಲ‌. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎನ್‌ಇಕೆಆರ್‌ಟಿಸಿಗೆ ಸೇರಿದ ಕೆಎ 28 ಎಫ್ 2196 ಸಂಖ್ಯೆಯ ಬಸ್‌ ಖಾಸಗಿ ಒಪ್ಪಂದದ ಮೇರೆಗೆ ಮದುವೆ ಸಮಾರಂಭಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಬೀದರ್‌ಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಮನೆಗೆ ನುಗ್ಗಿದೆ. ಘಟನೆಯಲ್ಲಿ ಚಾಲಕ ಶಿವಪ್ಪ ಕುಂಬಾರಗೂ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಫರತಾಬಾದ್ ಪೊಲೀಸರು ಭೇಟಿ ನೀಡಿ‌, ಪರಿಶೀಲನೆ ನಡೆಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ