ಬೆಂಬಲ ಬೆಲೆಯಲ್ಲಿ ಸೋಯಾಬೀನ್ ಖರೀದಿ: 7 ಖರೀದಿ ಕೇಂದ್ರಗಳ ಸ್ಥಾಪನೆ
ಶನಿವಾರ, 17 ನವೆಂಬರ್ 2018 (20:07 IST)
ರೈತರಿಂದ ಪ್ರತಿ ಕ್ವಿಂಟಲ್‍ಗೆ 3399ರೂ.ಗಳ ಬೆಂಬಲ ಬೆಲೆಯಲ್ಲಿ ಸೋಯಾಬೀನ್ ಖರೀದಿಗಾಗಿ ಒಟ್ಟು 7 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಲಬುರಗಿ ತಾಲೂಕಿನ ಮಹಾಗಾಂವ. ಆಳಂದ ತಾಲೂಕಿನ ಖಜೂರಿ, ಮಾದನಹಿಪ್ಪರಗಾ, ನಿಂಬರ್ಗಾ ಹಾಗೂ ಚಿಂಚೋಳಿ ತಾಲೂಕಿನ ಚಿಮ್ಮನಚೋಡ, ಕೋಡ್ಲಿ, ಐನೋಳ್ಳಿ ಗ್ರಾಮಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರೈತರು 2018ರ ನವೆಂಬರ್ 24ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅದೇ ರೀತಿ ಈ ಹಿಂದೆ ಉದ್ದಿನಕಾಳು ಖರೀದಿಗಾಗಿ ಹೆಸರು ನೋಂದಾಯಿಸಲು ನೀಡಲಾದ ದಿನಾಂಕವನ್ನು ನವೆಂಬರ್ 16 ರಿಂದ 24ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಡಿಸಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಪ್ರತಿ ಎಕರೆಗೆ 5 ಕ್ವಿಂ. ಗರಿಷ್ಠ ಪ್ರಮಾಣದಂತೆ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂ. ಸೋಯಾಬೀನ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ರೈತರು ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.
ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೊಲದ ಪಹಣಿ ಪತ್ರ, ಬೆಳೆ ದೃಢೀಕರಣ ಪತ್ರ, ಆಧಾರ ಕಾರ್ಡ, ಹಾಗೂ ಆಧಾರ ಕಾರ್ಡ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರುವ ಪಾಸ್‍ಬುಕನ ಪುಸ್ತಕದ ಝಿರಾಕ್ಸ್ ಪ್ರತಿಯನ್ನು ದೃಢೀಕರಿಸಿ ಸಲ್ಲಿಸಬೇಕು. ಸೋಯಾಬೀನ್ ಖರೀದಿ ಪ್ರಕ್ರಿಯೇಯು ಡಿಸೆಂಬರ್ 6ರವರೆಗೆ ಮಾತ್ರ ಇರುತ್ತದೆ.