ಕಾಂಗ್ರೆಸ್‍ಗೆ ಮತ ಕೊಟ್ಟರೆ ವ್ಯರ್ಥ,ಬಿಜೆಪಿಗೆ ಎಲ್ಲರೂ ಸಮಾನ: ಡಾ.ಅಶ್ವತ್ಥನಾರಾಯಣ್

Krishnaveni K

ಸೋಮವಾರ, 22 ಏಪ್ರಿಲ್ 2024 (13:47 IST)
ಬೆಂಗಳೂರು: ದೃಢವಾದ ನಿಲುವಿಲ್ಲದ, ಜನರಲ್ಲಿ ಗೊಂದಲ ಉಂಟು ಮಾಡುವ, ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್‍ಗೆ ಮತ ಕೊಟ್ಟರೆ ಅದು ವ್ಯರ್ಥ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆಯಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಸುರಕ್ಷಿತತೆ ಕುರಿತು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಕಾರ್ಪೊರೇಟರ್ ಮಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.


ಕೊಲೆಗಾರನ ರಕ್ಷಣೆ ಮಾಡುವ ಪ್ರಯತ್ನ ನಡೆದಿದೆ. ನನ್ನ ಮಗಳ ಮೇಲೆ ಮಸಿ ಬಳಿಯುವ ಯತ್ನ ನಡೆದಿದೆ ಎಂದು ಸ್ವತಃ ನೇಹಾ ಅವರ ತಂದೆ ಹೇಳಿದ್ದಾರೆ. ಸಿಬಿಐ ತನಿಖೆಗೆ ಒಪ್ಪಿಸಲು ಕೋರಿದ್ದಾರೆ ಎಂದು ವಿವರಿಸಿದರು. ಕೆಜಿಹಳ್ಳಿ- ಡಿಜೆ ಹಳ್ಳಿ ಗಲಭೆಯಲ್ಲಿ ಸ್ವತಃ ಅವರ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಆ ಶಾಸಕರ ಪರ ನಿಂತಿಲ್ಲ ಎಂದು ಆಕ್ಷೇಪಿಸಿದರು.
ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಹಿಂದಿನ ಯುಪಿಎ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹೇಳಿದ್ದರು ಎಂದು ನೆನಪಿಸಿದರು. ಎಲ್ಲರ ಆಸ್ತಿ ವಶಪಡಿಸಿ ಮರುಹಂಚಿಕೆ ಮಾಡುವುದಾಗಿ ಹೇಳಿದ್ದರು. ಇವರ ಆಸ್ತಿ ಮೊದಲು ಮರುಹಂಚಿಕೆ ಮಾಡಲಿ ಎಂದು ಆಗ್ರಹಿಸಿದರು. ಇವರು ಜನರ ಆಸ್ತಿ ನುಂಗಿದವರು. ಇಂಥ ಹೇಳಿಕೆ ಕೊಡಲು ಇವರಿಗೆಷ್ಟು ಧೈರ್ಯ ಇರಬೇಕು. ಇವರ ಮನಸ್ಥಿತಿ ಏನಿದೆ ಎಂದು ಅರ್ಥವಾಗುತ್ತದೆ ಎಂದರು.


ಬಿಜೆಪಿ ಎಲ್ಲರನ್ನು ಸಮಾನರಾಗಿ ಕಾಣುತ್ತದೆ. ಬಡವರಿಗೆ ಮೊದಲನೇ ಹಕ್ಕು ಇರಬೇಕು. ಆದರೆ, ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎನ್ನುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಅವರು ಬಡವರ ವಿರೋಧಿ ಎಂದು ಪ್ರಶ್ನೆಗೆ ಉತ್ತರಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ