ನಾವು ಹೇಳಿದ್ದು ಕೇಳಿದ್ದರೆ ಸಿದ್ದರಾಮಯ್ಯಗೆ ಹೀಗಾಗ್ತಿರಲಿಲ್ಲ: ಬಿ ವೈ ವಿಜಯೇಂದ್ರ

Krishnaveni K

ಬುಧವಾರ, 2 ಅಕ್ಟೋಬರ್ 2024 (16:25 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ, ಭಂಡತನ, ತಪ್ಪು ನಿರ್ಧಾರಗಳು ಬರುವ ದಿನಗಳಲ್ಲಿ ಅವರಿಗೆ ಕಂಟಕ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ
ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೈಸೂರಿನ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಒಂದಾದ ಮೇಲೊಂದು ತಪ್ಪು ಮಾಡುತ್ತಿದ್ದಾರೆ. ಮುಡಾ ವಿಚಾರವನ್ನು ಬಿಜೆಪಿ ಕೈಗೆತ್ತಿಕೊಂಡಾಗಲೇ ಅವರು ಎಚ್ಚತ್ತುಕೊಳ್ಳಬೇಕಿತ್ತು. ಮೊನ್ನೆ ತೆಗೆದುಕೊಂಡ ನಿರ್ಧಾರವನ್ನು ಬಿಜೆಪಿ ಹೋರಾಟ ತೆಗೆದುಕೊಳ್ಳುವ ಮುನ್ನವೇ ‘ತಪ್ಪಾಗಿದೆ; ನಿವೇಶನ ವಾಪಸ್ ಕೊಡುವೆ’ ಎಂಬ ನಿರ್ಣಯ ಮಾಡಿದ್ದರೆ ನಾವು ಇಷ್ಟೆಲ್ಲ ಹೋರಾಟ ಮಾಡಲು ಆಗುತ್ತಿರಲಿಲ್ಲ ಎಂದರು.

ರಾಜ್ಯಪಾಲರಿಂದ ಸ್ಯಾಂಕ್ಷನ್, ಹೈಕೋರ್ಟಿನಲ್ಲಿ ಛೀಮಾರಿ, ವಿಶೇಷ ಕೋರ್ಟಿನಲ್ಲಿ ತನಿಖೆಗೆ ಆದೇಶ- ಇವೆಲ್ಲವೂ ಕೂಡ ತಪ್ಪಿಸಬಹುದಿತ್ತು. ಬಹುಶಃ ಸಿದ್ದರಾಮಯ್ಯರಿಗೆ ಡಿ.ಕೆ.ಶಿವಕುಮಾರರೇ ಸಲಹೆ ಕೊಡುತ್ತಿರಬೇಕು. ಯಾಕೆಂದರೆ ಅವರು ಒಂದಾದ ಮೇಲೊಂದು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಒಂದೆಡೆ ಲೋಕಾಯುಕ್ತವು ಎಫ್‍ಐಆರ್ ದಾಖಲಿಸಿದೆ. ಸಿಬಿಐ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ನಿವೇಶನಗಳನ್ನು ವಾಪಸ್ ಕೊಡುವುದಾಗಿ ಮುಖ್ಯಮಂತ್ರಿಗಳ ಶ್ರೀಮತಿಯವರು ಪತ್ರ ಬರೆದ 24 ಗಂಟೆ ಆಗುವ ಮೊದಲೇ ಮುಡಾದವರು ಖಾತೆ ರದ್ದು ಮಾಡಿದ್ದು, ಇದು ಕೂಡ ಸಿಬಿಐ ಪೂರಕ ಘಟನೆ. ಸಿದ್ದರಾಮಯ್ಯನವರು ಶಕ್ತಿಯುತ ರಾಜಕಾರಣಿ, ಮುಖ್ಯಮಂತ್ರಿಯಾದ ಕಾರಣ ಲೋಕಾಯುಕ್ತದಿಂದ ತನಿಖೆ ಸಾಧ್ಯವಿಲ್ಲ. ಸಿಬಿಐ ತನಿಖೆಯೇ ನಡೆಯಲಿ ಎಂದು ಸ್ನೇಹಮಯಿ ಕೃಷ್ಣ ಅವರು ಹೇಳಿದ್ದಾರೆ. ಬಿಜೆಪಿ ಸಹ ಸಿಬಿಐ ತನಿಖೆಗೆ ಒತ್ತಾಯಿಸುವ ಉದ್ದೇಶವೂ ಇದೇ ಆಗಿದೆ ಎಂದು ವಿಶ್ಲೇಷಣೆ ಮಾಡಿದರು.
 
ಮುಡಾ ಕಮಿಷನರ್ ಅಚ್ಚರಿಯ ನಿರ್ಧಾರ..
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ಅದಕ್ಕೂ ಮೊದಲು ಸಿಬಿಐ ತನಿಖೆಗೆ ಕೊಡಬೇಕೆಂದು ನಾವು ಆಗ್ರಹಿಸುತ್ತ ಬಂದಿದ್ದೇವೆ ಎಂದ ಅವರು, ಮುಡಾ ಕಮಿಷನರ್ ನಿರ್ಧಾರ ಅಚ್ಚರಿ ತರುವಂತಿದೆ. ಮುಖ್ಯಮಂತ್ರಿಗಳ ಧರ್ಮಪತ್ನಿ ಪತ್ರ ಬರೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ಯಾವ ಆಧಾರದಲ್ಲಿ ಮುಡಾ ಕಮಿಷನರ್ ಖಾತೆ ರದ್ದು ಮಾಡಿದ್ದಾರೆ ಎಂದು ಕೇಳಿದರು.

ಹೈಕೋರ್ಟ್ ತೀರ್ಪು, ಎಂಪಿ, ಎಂಎಲ್‍ಎ ಕೋರ್ಟಿನ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೇ ಎಂದ ಅವರು, ಖಾತೆ ರದ್ದು ಮಾಡುವ ಮುಡಾ ಅಧಿಕಾರಿಗಳ ಆದೇಶವೂ ಕಾನೂನುಬಾಹಿರವೇ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅಧಿಕಾರಿಗಳೂ ಈ ಹಗರಣದಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಹೇಳಿದರು. 
 
ನಿವೇಶನಗಳನ್ನು ವಾಪಸ್ ಮಾಡಿದ್ದು, ಮುಡಾ ಕಮಿಷನರ್ ಅವರು ‘ಪ್ರಾಮಾಣಿಕವಾಗಿ’ ಖಾತೆ ರದ್ದು ಮಾಡಿದ್ದರಿಂದ ಮುಖ್ಯಮಂತ್ರಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ತಪ್ಪುಗಳು ನಿರಂತರವಾಗಿ ನಡೆದಿವೆ. ಅವುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಮುಂದೆ ಅವರು ತನಿಖೆ ಎದುರಿಸಲೇಬೇಕಿದೆ ಎಂದು ಅಭಿಪ್ರಾಯಪಟ್ಟರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ