ಮಹಾರಾಷ್ಟ್ರ ಪುಂಡರಿಗೆ ರಾಜ್ಯ ಸರ್ಕಾರ ತಕ್ಕ ಪಾಠ ಕಲಿಸಬೇಕು: ಬಿವೈ ವಿಜಯೇಂದ್ರ

Krishnaveni K

ಸೋಮವಾರ, 24 ಫೆಬ್ರವರಿ 2025 (16:11 IST)
ಮೈಸೂರು: ಕನ್ನಡಿಗರ ಭಾವನೆಗೆ ಧಕ್ಕೆ ತರುವ ಪುಂಡರ ವಿರುದ್ಧ ರಾಜ್ಯ ಸರಕಾರವು ದೃಢತೆಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಕನ್ನಡಿಗರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮರಾಠಿಗರ ಪುಂಡಾಟದ ಕುರಿತು ಗಮನ ಸೆಳೆದ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಕನ್ನಡಿಗರ ವಿಚಾರದಲ್ಲಿ ಈ ಭಂಡ ಸರಕಾರ ರಾಜಕಾರಣ ಮಾಡುತ್ತದೆ ಎಂದು ಅನಿಸುತ್ತಿಲ್ಲ ಎಂದ ಅವರು, ಪ್ರಚೋದನಕಾರಿ ಹೇಳಿಕೆ ಕೊಡುವುದು ಮತ್ತು ಪುಂಡಾಟಿಕೆ ಮಾಡುವವರಿಂದ ಎರಡೂ ರಾಜ್ಯಗಳಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡಿಗರನ್ನು ಬೆದರಿಸುವವರು, ಪುಂಡಾಟಿಕೆ ಮಾಡುವವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಇಲ್ಲವಾದರೆ ಇದು ರಾಜ್ಯಕ್ಕೇ ಹರಡುವ ಸಾಧ್ಯತೆ ಇದೆ ಎಂದು ಆತಂಕದಿಂದ ತಿಳಿಸಿದರು.

ಉಚಿತ ವಿದ್ಯುತ್ ಹಣವನ್ನು ಸರಕಾರ ಭರಿಸಬೇಕಿದೆ. ಇಲ್ಲದಿದ್ದರೆ, ಸಾರ್ವಜನಿಕರಿಂದ ಹಣ ವಸೂಲಿಗೆ ಅವಕಾಶ ಕೊಡುವಂತೆ ಎಸ್ಕಾಂಗಳು ಕೆಇಆರ್‍ಸಿಗೆ ಮನವಿ ಸಲ್ಲಿಸಿವೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದರು. ನಾನು ಇವತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ವೇಳೆ ಕೊಟ್ಟ ಗ್ಯಾರಂಟಿ ಯೋಜನೆಗಳ ಕುರಿತ ವಾಗ್ದಾನ ಈಡೇರುತ್ತಿಲ್ಲ; ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಿಡಬ್ಲ್ಯುಡಿ, ನೀರಾವರಿ ಇಲಾಖೆಗಳು ವಿದ್ಯುತ್ ಕಂಪೆನಿಗಳಿಗೆ 6 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದಾಗಿ ಸಚಿವರೇ ಹೇಳಿದ್ದಾರೆ. ಇನ್ನೊಂದು ಕಡೆ ಶಕ್ತಿ ಯೋಜನೆ ಪ್ರಯುಕ್ತ ರಾಜ್ಯ ಸರಕಾರವು ಕೆಎಸ್‍ಆರ್‍ಟಿಸಿಗೆ 7 ಸಾವಿರ ಕೋಟಿ ಬಾಕಿ ಕೊಡಬೇಕಾಗಿದೆ. ಮತ್ತೊಂದು ಕಡೆ ವಿದ್ಯುತ್ ಕಂಪೆನಿಗಳು ಹಣಕ್ಕಾಗಿ ತಾಕೀತು ಮಾಡಿವೆ. ರಾಜ್ಯ ಸರಕಾರ ಹಣ ಕೊಡಬೇಕು; ಇಲ್ಲವೇ ಗ್ರಾಹಕರ ಮೇಲೆ ಈ ಭಾರ ಹೊರಿಸಬೇಕಾಗುತ್ತದೆ ಎಂದು ಹೇಳಿದ್ದಾಗಿ ಗಮನ ಸೆಳೆದರು.

ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಕುರಿತಂತೆ ಜನರ ಕಿವಿಗೆ ಹೂವು ಮುಡಿಸುವುದನ್ನು ಬಿಟ್ಟು ವಾಸ್ತವಿಕ ಸತ್ಯವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕದ ಆರ್ಥಿಕ ಸ್ಥಿತಿಗತಿ, ಸಂಕಷ್ಟದ ಕುರಿತು ಮುಖ್ಯಮಂತ್ರಿಗಳು ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.
 
 
                                                       
 
   
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ